ನವದೆಹಲಿ: ಮಂಡ್ಯ ನಗರ ವರ್ತುಲ ರಸ್ತೆಯನ್ನು ಅದಷ್ಟು ಬೇಗ ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಗುರುವಾರ ಭೇಟಿಯಾಗಿ ಚರ್ಚೆ ನಡೆಸಿದರು.
ಗಡ್ಕರಿ ಅವರನ್ನು ಭೇಟಿಯಾದ ಕುಮಾರಸ್ವಾಮಿ, ‘ಈಗಾಗಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ. ಆದರೆ, ಪ್ರಾಧಿಕಾರದ ಅಂದಾಜು ವೆಚ್ಚ ಯೋಜನೆಗೆ ಸಾಕಾಗುವುದಿಲ್ಲ. ₹900 ಕೋಟಿ ವೆಚ್ಚದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಕೊಟ್ಟು ಅನುಷ್ಠಾನಗೊಳಿಸಬೇಕು’ ಎಂದು ಕುಮಾರಸ್ವಾಮಿ ಮನವಿ ಮಾಡಿದರು. ಈ ಮೊತ್ತ ಬಿಡುಗಡೆ ಮಾಡಲು ಗಡ್ಕರಿ ಒಪ್ಪಿದ್ದಾರೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. ಭೂಸ್ವಾಧೀನಕ್ಕೆ ₹550 ಕೋಟಿ ಹಾಗೂ ನಿರ್ಮಾಣ ಕಾರ್ಯಕ್ಕೆ ₹350 ಕೋಟಿ ಬೇಕಾಗುತ್ತದೆ ಎಂದರು.
ಜೇವರ್ಗಿ- ಚಾಮರಾಜನಗರ ನಡುವೆ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡುವ ಬಗ್ಗೆಯೂ ಚರ್ಚೆ ನಡೆಸಿದರು.
ಜೇವರ್ಗಿ- ಚಾಮರಾಜನಗರ ನಡುವೆ ಪಾಂಡವಪುರದ ಹಾಡುವ ಹೆದ್ದಾರಿ 150ಎ ದ್ವಿಪಥ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಒಪ್ಪಿಗೆ ಕೊಡಬೇಕು ಹಾಗೂ ಪಾಂಡವಪುರ ರೈಲು ನಿಲ್ದಾಣದ ಬಳಿ ಇರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ರೈತರ ಅನುಕೂಲಕ್ಕಾಗಿ ಹೆದ್ದಾರಿ ಪಕ್ಷದಲ್ಲಿಯೇ ಟ್ರಕ್ ವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಕೋಲಾರ ಲೋಕಸಭೆ ಕ್ಷೇತ್ರವೂ ಸೇರಿ ಕರ್ನಾಟಕದ ಹಲವಾರು ಹೆದ್ದಾರಿ ಯೋಜನೆಗಳ ಮಂಜೂರಾತಿ ಹಾಗೂ ಚಾಲ್ತಿಯಲ್ಲಿರುವ ಯೋಜನೆಗಳನ್ನು ವೇಗಗತಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಗಡ್ಕರಿ ಅವರೊಂದಿಗೆ ಸಚಿವರು ಮಾತುಕತೆ ನಡೆಸಿದರು.
‘ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಆರಂಭ’
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಆರಂಭ ಸಿಕ್ಕಿದೆ. ಈಗಾಗಲೇ ನಿತಿನ್ ಗಡ್ಕರಿ ಅವರ ಸಹಕಾರದಿಂದ ಜಿಲೆಯಲ್ಲಿ ಹಾದು ಹೋಗುವ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಮಾಡುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ₹900 ಕೋಟಿ ವೆಚ್ಚದಲ್ಲಿ ಮಂಡ್ಯ ನಗರ ವರ್ತುಲ ಅಭಿವೃದ್ಧಿಗೆ ಚಾಲನೆ ಸಿಗುತ್ತಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಮಂಡ್ಯ ನಗರವು ಉತ್ತಮ ಸಾರಿಗೆ ವ್ಯವಸ್ಥೆಯಿಂದ ಮುಂಚೂಣಿ ನಗರವಾಗಿ ರೂಪುಗೊಳ್ಳಬೇಕು ಎಂಬುದು ನನ್ನ ಕನಸಾಗಿದೆ. –ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ ‘ಹೆದ್ದಾರಿ ಅಭಿವೃದ್ಧಿಗೆ ವೇಗ’ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾದ ಮೇಲೆ ಮಂಡ್ಯದ ಲೋಕಸಭೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಈಗಾಗಲೇ ಹಲವಾರು ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. ಪಾಂಡವಪುರ ಭಾಗದ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ವೇಗವಾಗಿ ಆಗುತ್ತಿದೆ. -ಸಿ.ಎಸ್. ಪುಟ್ಟರಾಜು ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.