ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲಾ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂಬ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.
2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೊರಡಿಸಿದ ಆದೇಶವಿದು. ಈ ಆದೇಶದ ಪ್ರಕಾರ, ಶಾಲೆ ಹಾಗೂ ಶಾಲಾ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಇನ್ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದಕ್ಕೆ ಬಿಜೆಪಿ ನಾಯಕರ ಅಭಿಪ್ರಾಯವೇನು.? ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ, ಶಾಲಾ ಆವರಣದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಪ್ರಸ್ತಾವನೆ ಕೂಡ ಸಲ್ಲಿಸಬಾರದು ಎಂದೂ ಈ ಆದೇಶ ಪತ್ರದಲ್ಲಿ ಇದೆ. ಅವರೇ ಅಧಿಕಾರದಲ್ಲಿದ್ದಾಗ ನಿಯಮ ತಂದು ಈಗ ಆ ನಿಯಮವನ್ನು ನಾವು ಪಾಲಿಸುವುದಿಲ್ಲ ಎಂದರೆ ಬಿಜೆಪಿಯವರಿಗೆ ಮತಿಭ್ರಮಣೆಯಾಗಿದೆ ಎಂದರ್ಥವಲ್ಲವೇ.? ಎಂದು ಪ್ರಶ್ನಿಸಿದ್ದಾರೆ.
ಆರ್‌ಎಸ್ಎಸ್ ಪರ ವಹಿಸಿಕೊಂಡು ಮಾತಾಡುತ್ತಿರುವ ಬಿಜೆಪಿಯವರು ಈ ನಿಯಮ ರೂಪಿಸುವಾಗ ಆರ್‌ಎಸ್ಎಸ್ ಹೊರತುಪಡಿಸಿ ಎಂದು ನಮೂದಿಸಬಹುದಿತ್ತಲ್ಲವೆ.? ಆಗ ಇವರ ಬುದ್ಧಿಗೆ ಮಂಕು ಬಡಿದಿತ್ತೆ.? ಕಾನೂನು ಜಾರಿಗೆ ತಂದ ಮೇಲೆ ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಅದು ಆರ್‌ಎಸ್ಎಸ್ ಇರಲಿ ಇನ್ಯಾವುದೇ ಸಂಘಟನೆಯಿರಲಿ. ಕಾನೂನಿಗಿಂತ ಇಲ್ಯಾರು ದೊಡ್ಡವರಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.