ಮೈಸೂರು: ‘ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿಷಯಕ್ಕೆ ಸಂಬಂಧಿಸಿ ತಮಿಳುನಾಡಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಆ ವರದಿ ಆಧರಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಕೋರಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.
‘ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುತ್ತಿರುವ ದುಷ್ಟ ಶಕ್ತಿಗಳು ಯಾವಾಗಲೂ ಇಂತಹದ್ದೇ ಕೆಲಸ ಮಾಡುತ್ತಾ ಬಂದಿವೆ. ಅವರ ಬೆದರಿಕೆಗಳಿಗೆ ಹೆದರುವುದಿಲ್ಲ. ಅವರಿಗೆ ಅಗತ್ಯವಾದ ಭದ್ರತೆ ಒದಗಿಸಲಾಗುವುದು’ ಎಂದರು.
‘ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧಿಸಿ’ ಎಂಬ ಬಿಜೆಪಿ ನಾಯಕರ ಸವಾಲಿಗೆ ಪ್ರತಿಕ್ರಿಯಿಸಿದ ಸಿ.ಎಂ. ‘ಬಿಜೆಪಿಯವರು ಚುನಾವಣೆ ಸಂದರ್ಭ, ತಾಕತ್ತಿದ್ದರೆ ಬನ್ನಿ ಎಂದು ಸವಾಲು ಹಾಕಿದ್ದರು. ಆದರೆ ನಂತರದಲ್ಲಿ ಏನಾಯಿತು? ಸೋಲಲಿಲ್ಲವೇ?’ ಎಂದರು.
ತಾರತಮ್ಯವಿಲ್ಲ
ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶ್ರೀನಿವಾಸಪುರ ಶಾಸಕರು ನ್ಯಾಯಾಲಯದ ಮೆಟ್ಟಿಲು ಏರಿರುವ ಕುರಿತು ಪ್ರತಿಕ್ರಿಯಿಸಿ ‘ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ನಮ್ಮ ಶಾಸಕರಿಗೆ ಅನುದಾನ ಕೊಟ್ಟಿದ್ದರ?’ ಎಂದು ಪ್ರಶ್ನಿಸಿದರು. ‘ ಯಾರಿಗೂ ತಾರತಮ್ಯ ಮಾಡುವುದಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದು, ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ’ ಎಂದರು.