ಮಂಗಳೂರು: ‘ ಆರ್‌ಎಸ್ಎಸ್‌ಗೆ ಕಾಂಗ್ರೆಸ್ ಮನೆಗಳಿಂದಲೇ ಹಣ ಬರುತ್ತಿದೆ ಎಂಬುದು ಪ್ರಿಯಾಂಕ್ ಖರ್ಗೆಗೆ ತಿಳಿದಿಲ್ಲ. ಅಜ್ಞಾನ ಮತ್ತು ಅಧಿಕಾರದ ಮದದಿಂದ ಅವರು ಆರ್‌ಎಸ್ಎಸ್ ಬಗ್ಗೆ ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿ ಅಭಿನಂದಿಸಿ ಕಾಂಗ್ರೆಸ್ ಕಾರ್ಯಕರ್ತರ ತಾಯಂದಿರೇ ಆರ್‌ಎಸ್‌ಎಸ್‌ಗೆ ಹಣ ಕೊಡುತ್ತಾರೆ. ಕಾಂಗ್ರೆಸ್‌ನಲ್ಲಿ ಇರುವ ಬಹುತೇಕರಿಗೆ ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ’ ಎಂದು ಪ್ರತಿಪಾದಿಸಿದರು.
‘ಆರ್‌ಎಸ್‌ಎಸ್ ಯಾರನ್ನೂ ಶತ್ರುಗಳಾಗಿ ಕಾಣವುದಿಲ್ಲ. ಪ್ರಿಯಾಂಕ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಶಾಖೆಗೆ ಬಂದು ಚಟುವಟಿಕೆ ನೋಡಿ ವಾಸ್ತವವನ್ನು ತಿಳಿದುಕೊಳ್ಳಲಿ. ಅಲ್ಲಿ ಅನೇಕ ಶಿಕ್ಷಕರು ಇದ್ದಾರೆ. ಪ್ರಿಯಾಂಕ್ ಅವರಿಗೆ ಒಳ್ಳೆಯತನದ ಪಾಠ ಹೇಳಲು ಒಬ್ಬ ಶಿಕ್ಷಕ ಸಾಕು’ ಎಂದು ಹೇಳಿದರು.‘
‘ಆರ್‌ಎಸ್‌ಎಸ್ ಬಗ್ಗೆ ಕೆಟ್ಟಅಭಿಪ್ರಾಯ ಮೂಡಿಸುವಂತೆ ಪ್ರಿಯಾಂಕ್ ಅವರಿಗೆ ಆಮಿಷ ಒಡ್ಡಿ ರಾಹುಲ್ ಗಾಂಧಿ ಛೂ ಬಿಟ್ಟಿದ್ದಾರೆ. ಬಿ.ಕೆ ಹರಿಪ್ರಸಾದ್ ಕೂಡಾ ಸಂಘಟನೆಯ ಬಗ್ಗೆ ಮಾತನಾಡತೊಡಗಿದ್ದಾರೆ. ಹರಿಪ್ರಸಾದ್ ಏನೇ ಮಾಡಿದರೂ ಸಚಿವರಾಗುವುದು ಸಾಧ್ಯವಿಲ್ಲ’ ಎಂದು ರವಿಕುಮಾರ್ ಹೇಳಿದರು.
ನೀನ್ಯಾವ ಪುಟಗೋಸಿ: ಸಿ.ಸಿ.ಪಾಟೀಲ ಪ್ರಶ್ನೆ
ಗದಗ: ‘ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರಿಗೇ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಇನ್ನು, ನೀನ್ಯಾವ ಪುಟಗೋಸಿ’ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇಲ್ಲಿ ವಾಗ್ದಾಳಿ ನಡೆಸಿದರು.
‘ತಂದೆ ಎಐಸಿಸಿ ಅಧ್ಯಕ್ಷ ಎಂಬ ಕಾರಣಕ್ಕೆ ಪ್ರತಿ ವಿಷಯದಲ್ಲೂ ಮೂಗು ತೂರಿಸುತ್ತಾರೆ. ಆರ್‌ಎಸ್‌ಎಸ್ ವಿರುದ್ಧ ನಿಷೇಧಕ್ಕೆ ಪತ್ರ ಬರೆದಿರುವುದು, ಅದಕ್ಕೆ ಸಹಿ ಹಾಕಿ, ಮುಂದಿನ ಕ್ರಮಕ್ಕೆ ಸಿ.ಎಂ ಆದೇಶಿಸಿದ್ದು ಸರಿಯಲ್ಲ. ಕೆಲವೇ ವರ್ಷಗಳಲ್ಲಿ ನಿನಗೆ (ಪ್ರಿಯಾಂಕ್ ಖರ್ಗೆ), ನಿಮ್ಮಪ್ಪನಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಏಕವಚನದಲ್ಲಿ ಹರಿಹಾಯ್ದರು.
‘ಸರ್ಕಾರಕ್ಕೆ ತಾಕತ್ತಿದ್ದರೆ ಪಿಎಫ್ಐ, ಎಸ್‌ಡಿಪಿಐ ನಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಲಿ’ ಎಂದು ಅವರು ಸವಾಲು ಹಾಕಿದರು.
‘ಪ್ರಿಯಾಂಕ್‌ಗೆ ಏನು ಮಾಡಲು ಸಾಧ್ಯ?’
ಉಡುಪಿ: ‘ಆರ್‌ಎಸ್ಎಸ್ ಎಂದರೆ ಸೇವೆ, ದೇಶಭಕ್ತಿ, ಶಿಸ್ತು. ಅದು ಇಂದಿರಾ ಗಾಂಧಿಗೇ ಹೆದರಿಲ್ಲ, ನೆಹರೂ ಮುಂದೆ ಮಂಡಿಯೂರಿಲ್ಲ. ಇನ್ನು ಪ್ರಿಯಾಂಕ್‌ಗೆ ಏನು ಮಾಡಲು ಸಾಧ್ಯ’ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಿಯಾಂಕ್ ಖರ್ಗೆ, ಅವರ ಅಧಿಕಾರ ಶಾಶ್ವತ ಅಲ್ಲ. ಆರ್‌ಎಸ್ಎಸ್ ಶಾಶ್ವತ. ಅದರ ವಿಚಾರ ಶಾಶ್ವತ’ ಎಂದರು.
‘ಎರಡೂವರೆ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕೋಮಾ ಸ್ಥಿತಿಯಲ್ಲಿದೆ. ಖಾತೆ ನಿಭಾಯಿಸಲಾಗದೇ ವಿಫಲರಾಗಿದ್ದಾರೆ. ಗ್ರಾಮೀಣ ರಸ್ತೆಗಳು ಗುಂಡಿ ಬೀಳಲು ಪ್ರಿಯಾಂಕ್ ಕಾರಣ. ಒಂದು ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿಲ್ಲ. ಆದರೂ ಆರ್‌ಎಸ್ಎಸ್ ಟೀಕಿಸುವ ದಾರ್ಷ್ಟ್ಯ ಪ್ರದರ್ಶಿಸಿದ್ದಾರೆ’ ಎಂದರು.
‘ಸೇವೆ ಅಲ್ಲಗಳೆಯಲಾಗದು, ತಪ್ಪುಗಳಿದ್ದರೆ ನಿವಾರಿಸಲು ಯತ್ನಿಸಿ’
ಉಡುಪಿ: ‘ಆರ್‌ಎಸ್‌ಎಸ್ ಚಟುವಟಿಕೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಭಿಪ್ರಾಯ ತಿಳಿಸುವ ಹಕ್ಕು ಅವರಿಗೆ ಇದೆ. ಮುಖ್ಯಮಂತ್ರಿ ಎಲ್ಲರ ಜೊತೆ ಚರ್ಚಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಇಲ್ಲಿ ಮಾತನಾಡಿದ ಅವರು, ‘ಆರ್‌ಎಸ್ಎಸ್ ತನ್ನ ಹೆಸರಿನಂತೆ ರಾಷ್ಟ್ರೀಯ ಸೇವೆಯನ್ನು ಮಾಡುತ್ತಿದೆ. ವ್ಯವಸ್ಥೆಯಲ್ಲಿ ಕೆಲವು ತಪ್ಪುಗಳಾಗುವುದು ಸಹಜ. ತಪ್ಪುಗಳು ಇದೆಯೋ ಇಲ್ಲವೋ ವಿಮರ್ಶಿಸಬೇಕು’ ಎಂದರು.
‘ಒಬ್ಬರಿಗೆ ಸರಿ ಎಂದು ಕಂಡದ್ದು ಮತ್ತೊಬ್ಬರಿಗೆ ತಪ್ಪು ಎಂದೆನಿಸಬಹುದು. ತಪ್ಪುಗಳಿದ್ದರೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ’ ಎಂದು ಸ್ವಾಮೀಜಿ ಸಲಹೆ ಮಾಡಿದ್ದಾರೆ.
‘ಆರ್‌ಎಸ್ಎಸ್ ನೂರು ವರ್ಷಗಳಿಂದ ಮಾಡುತ್ತಿರುವ ದೇಶ ಸೇವೆ ಮತ್ತು ಅದರಿಂದ ದೇಶಕ್ಕಾಗಿರುವ ಲಾಭ ಗಮನಿಸಬೇಕು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವೆಯನ್ನು ಅಲ್ಲಗಳೆಯಲಾಗದು’ ಎಂದರು.
ಬಿಜೆಪಿಯಿಂದ ‘ಪೋಸ್ಟರ್’ ತಿರುಗೇಟು
ಕಲಬುರಗಿ: ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧ ಕೋರಿ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ಆರ್‌ಎಸ್‌ಎಸ್ ಪರ ‘ಪೋಸ್ಟರ್’ ಪ್ರಚಾರ ನಡೆಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ವಿವಿಧೆಡೆ ‘ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್ ಅನ್ನೂ ಪ್ರೀತಿಸುತ್ತಾರೆ’ ಎಂಬ ಬರಹವುಳ್ಳ ಪೋಸ್ಟರ್ ಅಂಟಿಸಿದ್ದಾರೆ.
‘ಪ್ರಿಯಾಂಕ್ ಖರ್ಗೆ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ತಿರುಗೇಟು ನೀಡಲು ಯುವಜನರು ಸೇರಿ ಪೋಸ್ಟರ್ ಅಂಟಿಸುತ್ತಿದ್ದೇವೆ. ರಾಷ್ಟ್ರಭಕ್ತರೆಲ್ಲರೂ ಇದರಲ್ಲಿ ಪಾಲ್ಗೊಂಡಿದ್ದಾರೆ. ಸೈದ್ಧಾಂತಿಕ ಅಭಿಯಾನ ಮುಂದುವರಿಯಲಿದೆ’ ಎಂದು ಮುಖಂಡರಾದ ಅಮರನಾಥ ಪಾಟೀಲ, ಶಿವರಾಜ ಪಾಟೀಲ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.