ADVERTISEMENT

ಜಾಗತಿಕ ನಾಯಕತ್ವಕ್ಕೆ 10 ವರ್ಷಗಳು ನಿರ್ಣಾಯಕ: ರಾಮ್‌ ಮಾಧವ್

ಆರ್‌ಎಸ್‌ಎಸ್‌ ಕಾರ್ಯಕಾರಿಣಿ ಸದಸ್ಯ ರಾಮ್‌ ಮಾಧವ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 19:54 IST
Last Updated 9 ಜನವರಿ 2022, 19:54 IST
ರಾಮ್‌ ಮಾಧವ್
ರಾಮ್‌ ಮಾಧವ್   

ಬೆಂಗಳೂರು: ‘ಸಾಂಕ್ರಾಮಿಕ ಕಾಯಿಲೆಯಾದ ಕೋವಿಡ್ ಜಗತ್ತನ್ನು ಕಾಡುತ್ತಿರುವ ಈ ವೇಳೆ ಜಾಗತಿಕ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡಾಗಿದೆ. ಈ ಸಂದರ್ಭದಲ್ಲಿ ಭಾರತವು ವಿದೇಶಾಂಗ ಆಲೋಚನೆಗಳನ್ನು ಬದಲಾಯಿಸಿಕೊಂಡು ಸಾಗಬೇಕು’ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ರಾಮ್‌ ಮಾಧವ್ ತಿಳಿಸಿದರು.

ಸಂವಾದ ವರ್ಲ್ಡ್ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ದಿ ನ್ಯೂ ವರ್ಲ್ಡ್‌ ಆರ್ಡರ್’ ಹಾಗೂ ಅದರ ಕನ್ನಡ ಅವತರಣಿಕೆ ‘ನವ ಜಾಗತಿಕ ವ್ಯವಸ್ಥೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

‘ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ, ಆಯ್ದುಕೊಂಡ ಮಾರ್ಗದಲ್ಲಿ ದೋಷವಿದ್ದಿದ್ದರಿಂದ ಅವಕಾಶಗಳು ಕೈತಪ್ಪಿದವು. 1962ರ ನಂತರ ಭಾರತ ಹೊರಜಗತ್ತಿನ ಕಡೆಗೆ ಆಲೋಚಿಸುವುದನ್ನು ಬಿಟ್ಟು, ಸಂಪೂರ್ಣ ಅಂತರ್ಮುಖಿಯಾಯಿತು. ಇದರಿಂದಾಗಿ ತಲಾ ಆದಾಯ, ಯುದ್ಧೋಪಕರಣಗಳ ಖರೀದಿ, ಸಂಶೋಧನೆ, ಹೂಡಿಕೆ ಸೇರಿ ಅನೇಕ ಆರ್ಥಿಕ ವಿಚಾರದಲ್ಲಿ ಭಾರತ ಸಾಕಷ್ಟು ಹಿಂದೆ ಬೀಳಬೇಕಾಯಿತು. ಈಗ ಪರಿಸ್ಥಿತಿ ದೇಶಕ್ಕೆ ಪೂರಕವಾಗಿದ್ದು, ದೇಶವು ಜಾಗತಿಕ ನಾಯಕತ್ವ ವಹಿಸಲು ಮುಂದಿನ 10 ವರ್ಷಗಳು ನಿರ್ಣಾಯಕ’ ಎಂದು ರಾಮ್‌ ಮಾಧವ್ ಹೇಳಿದರು.

ADVERTISEMENT

ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಷನ್‌ನ ಭೌಗೋಳಿಕ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ನಿರ್ದೇಶಕ ಪ್ರೊ. ಮಾಧವ ದಾಸ್ ನಳಪತ್, ‘ಅಂತರರಾಷ್ಟ್ರೀಯ ವಿಚಾರಗಳನ್ನು ಕೇವಲ ಐಎಎಸ್ ಅಧಿಕಾರಿಗಳಷ್ಟೇ ನಿಭಾಯಿಸಬಲ್ಲರು ಎಂಬ ಸ್ಥಿತಿಯಿದೆ. ಭಾರತದ ಇಷ್ಟು ದೊಡ್ಡ ಕ್ರಿಯಾಶೀಲ ಸಮಾಜದ ಅನುಭವವನ್ನು ವಿದೇಶಾಂಗ ವ್ಯವಸ್ಥೆಯಲ್ಲಿ ಗಣನೆಗೇ ತೆಗೆದುಕೊಳ್ಳದಿರುವುದು ಸರಿಯಲ್ಲ. ಅಂತರರಾಷ್ಟ್ರೀಯ ವಿಚಾರಗಳ ನಿರ್ವಹಣೆ ಕುರಿತು ಈ ಕೃತಿಯು ಹೊಸ ದೃಷ್ಟಿಯನ್ನು ಒದಗಿಸುತ್ತದೆ’ ಎಂದರು.

ಪುದುಚೇರಿ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಂದಕಿಶೋರ್, ‘ತನ್ನ ರಾಷ್ಟ್ರೀಯ ಹಿತಾಸಕ್ತಿಯು ಜಾಗತಿಕ ಹಿತಕ್ಕೆ ಪೂರಕವಾಗಿದೆ ಎಂದು ಭಾರತ ನಂಬಿದೆ. ತನ್ನ ನಂಬಿಕೆ ಮತ್ತು ಅವುಗಳನ್ನು ಸಾಕಾರಗೊಳಿಸುವ ಸಾಮರ್ಥ್ಯದ ಮಧ್ಯೆ ಇರುವ ಅಂತರವನ್ನು ರಾಷ್ಟ್ರವೊಂದು ಹೇಗೆ ನಿಭಾಯಿಸುತ್ತದೆ ಎಂಬ ಆಸಕ್ತಿದಾಯಕ ವಿಷಯವನ್ನು ಕೃತಿಯಲ್ಲಿ ವಿವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.