
RSS ಪಥಸಂಚಲನ
ಬೆಂಗಳೂರು: ‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನೀಡುವ ಸಂಬಂಧ ನವೆಂಬರ್ 5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಪಥಸಂಚಲನದ ಸಂಚಾಲಕರೂ ಆದ ಚಿಂಚೋಳಿಯ ಹಿರಿಯ ನಾಗರಿಕ ಅಶೋಕ್ ಪಾಟೀಲ್ (70) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ (ಕಲಬುರಗಿ) ಗುರುವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ನವೆಂಬರ್ 5ರಂದು ಸಂಜೆ 5 ಗಂಟೆಗೆ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿರುವ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಪುನಃ ಶಾಂತಿ ಸಭೆ ನಡೆಸಬೇಕು. ಈ ಸಭೆಗೆ ಸಂಬಂಧಿಸಿದ ಅರ್ಜಿದಾರರು ಮತ್ತು ಅವರ ಪರ ವಕೀಲರು ಭಾಗವಹಿಸಬೇಕು’ ಎಂದು ಆದೇಶಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತು.
ಕೆ.ಶಶಿಕಿರಣ್ ಶೆಟ್ಟಿ ವಾದ: ಹೈಕೋರ್ಟ್ ಆದೇಶದಂತೆ ಸಭೆ ಆಯೋಜಿಸಲಾಗಿತ್ತು. ಆದರೆ, ಅರ್ಜಿದಾರರೇ ಗೈರಾಗಿದ್ದರು. ಹಾಗಾಗಿ, ಏನೂ ತೀರ್ಮಾನ ಕೈಗೊಳ್ಳಲು ಆಗಿಲ್ಲ. ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಅರ್ಜಿದಾರರು ಸಹಕಾರ ನೀಡದೆ ಇದೀಗ ಕೇಂದ್ರ ಸರ್ಕಾರವನ್ನೂ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅವರ ನಡೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಲು ತವಕಿಸುತ್ತಿದೆ. ಅಗತ್ಯವಿದ್ದಲ್ಲಿ ಮತ್ತೊಂದು ದಿನ ಸಭೆ ಆಯೋಜಿಸಲಾಗುವುದು.
ಅರುಣ್ ಶ್ಯಾಮ್ ಪ್ರತಿವಾದ: ಅಕ್ಟೋಬರ್ 24ರಂದು ನಡೆದ ಸಭೆಗೆ ಅನುಮತಿ ಕೋರಿರುವ ಅರ್ಜಿದಾರರ ಪ್ರತಿನಿಧಿ ಹಾಜರಾಗಿದ್ದರು. ಅರ್ಜಿದಾರರ ಸಂಬಂಧಿಯ ಸಾವು ಸಂಭವಿಸಿದ್ದ ಕಾರಣ ಅವರು ಸಭೆಗೆ ಹಾಜರಾಗಿಲ್ಲ. ಸೀಮಿತ ಅವಧಿಯಲ್ಲಿಯೇ ಪಥಸಂಚಲನ ನಡೆಸಲು ಅನುಮತಿ ಬೇಕಾಗಿದೆ. ಇತರೆ ಸಂಘಟನೆಗಳು ರ‌್ಯಾಲಿ ನಡೆಸುವುದಕ್ಕೆ ನಮಗೆ ಯಾವುದೇ ಆಕ್ಷೇಪಣೆ ಇಲ್ಲ.
ನ್ಯಾಯಪೀಠ ಹೇಳಿದ್ದು: ಶಾಂತಿಯುತ ಪರಿಹಾರಕ್ಕಾಗಿ ಸಭೆ ನಡೆಸಿ ಹಾಜರಾಗಿ ಎಂದು ಸೂಚಿಸಿಲಾಗಿತ್ತು. ಅರ್ಜಿ ಸಲ್ಲಿಸಿದವರೇ ಸಭೆಗೆ ಹಾಜರಾಗಬೇಕಿತ್ತು. ಅವರ ಬದಲಾಗಿ ಇತರರು ಹಾಜರಾಗಿ ಹೇಳಿಕೆ ನೀಡುವುದು ಸರಿಯಾಗುವುದಿಲ್ಲ. ಗೊಂದಲ ಪರಿಹರಿಸುವುದು ನ್ಯಾಯಾಲಯದ ಉದ್ದೇಶವಾಗಿದೆ.
ಪಿಡಿಒ ಅಮಾನತು ಆದೇಶಕ್ಕೆ ತಡೆ
ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಪಿಡಿಒ ಕೆ.ಪಿ.ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೆಎಸ್‌ಎಟಿ (ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ) ತಡೆ ನೀಡಿದೆ.
ಈ ಸಂಬಂಧ ಪ್ರವೀಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಅವರಿದ್ದ ಪೀಠವು ಗುರುವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರ ವಾದ ಮನ್ನಿಸಿದ ಪೀಠವು, ಸರ್ಕಾರ ಹೊರಡಿಸಿರುವ ಅಮಾನತು ಆದೇಶ ಜಾರಿಗೆ ಮಧ್ಯಂತರ ತಡೆ ನೀಡಿತು. ಅಂತೆಯೇ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಅಮಾನತು: ಪ್ರವೀಣ್ ಕುಮಾರ್, ಅಕ್ಟೋಬರ್ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಕೈಯಲ್ಲಿ ದಂಡ ಹಿಡಿದು ಭಾಗಿಯಾಗಿದ್ದರು. ಇದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿತ್ತು.
ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಮಾನದಂಡವಾಗುವಂತಿರಬೇಕು. ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿಯಬೇಕು.–ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.