ADVERTISEMENT

ಕೇರಳದಿಂದ ಬರುವವರಿಗೆ ‘ನೆಗೆಟಿವ್‌’ ವರದಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 16:48 IST
Last Updated 16 ಫೆಬ್ರುವರಿ 2021, 16:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೇರಳದಿಂದ ರಾಜ್ಯಕ್ಕೆ ಬರುವವರು 72 ಗಂಟೆಗಳಿಗಿಂತ ಈಚೆಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಪಡೆದ ‘ಕೋವಿಡ್‌ ನೆಗೆಟಿವ್‌’ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಕೇರಳದಿಂದ ರಾಜ್ಯಕ್ಕೆ ಬರುವ ಎಲ್ಲ ಜನರ ಮೇಲೆ ವಿಶೇಷ ನಿಗಾ ಇಡುವಂತೆಯೂ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಹೋಟೆಲ್‌, ರೆಸಾರ್ಟ್‌, ಹಾಸ್ಟೆಲ್‌, ಹೋಂ ಸ್ಟೇಗಳು ಮತ್ತಿತರ ಕಡೆಗಳಲ್ಲಿ ಕೇರಳದಿಂದ ಹಿಂದಿರುಗಿರುವವರಿಗೆ ಪ್ರವೇಶ ನೀಡುವ ಮುನ್ನ ‘ಕೋವಿಡ್‌ ನೆಗೆಟಿವ್‌’ ವರದಿಯನ್ನು ಖಾತರಿಪಡಿಸಿಕೊಳ್ಳುವುದು ಕಡ್ಡಾಯ. ಕೇರಳದಿಂದ ಬರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕಾಲೇಜು ಮತ್ತು ಹಾಸ್ಟೆಲ್‌ಗಳ ಪ್ರತಿನಿಧಿಗಳು ಸಕ್ಷಮ ಪ್ರಾಧಿಕಾರದ ಜತೆ ಹಂಚಿಕೊಳ್ಳಬೇಕು. ನೋಡಲ್‌ ಅಧಿಕಾರಿಯ ಅನುಮತಿ ಇಲ್ಲದೆ ಪೋಷಕರ ಭೇಟಿಗೆ ಅವಕಾಶ ಕಲ್ಪಿಸುವಂತಿಲ್ಲ. ಊಟದ ಕೊಠಡಿಯಲ್ಲಿ ದಟ್ಟಣೆ ತಡೆಯಲು ಊಟದ ಅವಧಿಯನ್ನು ವಿಸ್ತರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ಕೇರಳದಿಂದ ಶಾಲಾ, ಕಾಲೇಜುಗಳಿಗೆ ನಿತ್ಯ ಪ್ರಯಾಣ ಮಾಡುವವರು ಪ್ರತಿ 15 ದಿನಗಳಿಗೊಮ್ಮೆ ‘ಕೋವಿಡ್‌ ನೆಗೆಟಿವ್‌’ ವರದಿ ಹಾಜರುಪಡಿಸಬೇಕು. ಕಳೆದ ಎರಡು ವಾರದ ಅವಧಿಯಲ್ಲಿ ಕೇರಳದಿಂದ ರಾಜ್ಯಕ್ಕೆ ಬಂದಿರುವವರು (72 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೊಳಗಾದವರ ಹೊರತಾಗಿ) ಆರ್‌ಟಿ– ಪಿಸಿಆರ್‌ ಮಾದರಿಯಲ್ಲಿ ಕೋವಿಡ್‌ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಈ ಸೂಚನೆ ಉಲ್ಲಂಘಿಸಿದವರನ್ನು ತಕ್ಷಣವೇ ಕ್ವಾರಂಟೈನ್‌ನಲ್ಲಿ ಇರಿಸಬೇಕು. ನೆಗೆಟಿವ್‌ ವರದಿ ಲಭ್ಯವಾದ ಬಳಿಕವೇ ಹೊರಹೋಗಲು ಅನುಮತಿ ನೀಡಬೇಕು ಎಂದು ಸೂಚಿಸಲಾಗಿದೆ.

ಐದು ಸೋಂಕಿತರಿದ್ದರೆ ನಿರ್ಬಂಧಿತ ವಲಯ

ಯಾವುದೇ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾದರೆ ಆ ಸ್ಥಳವನ್ನು ನಿರ್ಬಂಧಿತ ವಲಯ (ಕಂಟೇನ್‌ಮೆಂಟ್ ಝೋನ್‌) ಎಂದು ಘೋಷಿಸಬೇಕು. ಅಂತಹ ಸ್ಥಳದ ಮೇಲೆ ಸ್ಥಳೀಯ ಆಡಳಿತದಿಂದ ವಿಶೇಷ ನಿಗಾ ಇರಿಸಬೇಕು. ಏಳು ದಿನಗಳ ಬಳಿಕ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.