ADVERTISEMENT

ಇನ್ನು ಮುಂದೆ ಆರ್‌ಟಿಇ ಕೋಟಾ ಇಲ್ಲ

ಯುಪಿಎ ಸರ್ಕಾರ ಜಾರಿ ಮಾಡಿದ್ದ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯದಲ್ಲಿ ಇತಿಶ್ರೀ

ಎ.ಎಂ.ಸುರೇಶ
Published 3 ಮಾರ್ಚ್ 2019, 7:21 IST
Last Updated 3 ಮಾರ್ಚ್ 2019, 7:21 IST
   

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ಆರ್‌ಟಿಇ ಕೋಟಾ ಇರುವುದಿಲ್ಲ. ಇದರ ಪರಿಣಾಮ ಈ ವರ್ಷ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಆರ್‌ಟಿಇ ಸೀಟಿನಿಂದ ವಂಚಿತರಾಗಲಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 12 (ಸಿ)ಗೆ ತಿದ್ದುಪಡಿ ತಂದಿರುವ ಪರಿಣಾಮ ನೆರೆಹೊರೆ ಶಾಲೆ ವ್ಯಾಖ್ಯಾನದ ಮಾನದಂಡ ಬದಲಾಗಿದೆ. ವಾರ್ಡ್‌ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ, ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕೋಟಾದಡಿ ಪ್ರವೇಶ ನೀಡುವುದಿಲ್ಲ. ಇದರ ಪ್ರಕಾರ ಶಾಲೆಗಳ ಮ್ಯಾಪಿಂಗ್‌ ನಡೆದಿದ್ದು, ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಸರ್ಕಾರಿ ಶಾಲೆಗಳು ಇವೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

2018–19ನೇ ಸಾಲಿನಲ್ಲಿ 12,049 ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 1,16,187 ಮಕ್ಕಳು ಆರ್‌ಟಿಇ ಕೋಟಾದಡಿ ಎಲ್‌ಕೆಜಿ ಮತ್ತು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದರು. ಆದರೆ, ತಿದ್ದುಪಡಿಯಿಂದಾಗಿ ಈ ವರ್ಷ 100 ಖಾಸಗಿ ಶಾಲೆಗಳು ಕೂಡ ಆರ್‌ಟಿಇ ವ್ಯಾಪ್ತಿಗೆ ಬರುವುದಿಲ್ಲ. ಮ್ಯಾಪಿಂಗ್‌ ಕಾರ್ಯ ಮುಗಿದಿದ್ದು, ಸದ್ಯದಲ್ಲೇ ಸ್ಪಷ್ಟಚಿತ್ರಣ ಸಿಗಲಿದೆ ಎಂದು ತಿಳಿಸಿದರು.

ADVERTISEMENT

ಬಡವರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಉಚಿತವಾಗಿ ಗುಣಾತ್ಮಕ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಹಿಂದಿನ ಯುಪಿಎ ಸರ್ಕಾರ ಆರ್‌ಟಿಇ ಕಾಯ್ದೆಯನ್ನು ರೂಪಿಸಿತ್ತು.2012–13ನೇ ಸಾಲಿನಿಂದ ಈ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿದ್ದು, ಇದುವರೆಗೆ ಆರು ಲಕ್ಷಕ್ಕೂ ಅಧಿಕ ಮಕ್ಕಳು ಆರ್‌ಟಿಇ ಅಡಿ ಪ್ರವೇಶ ಪಡೆದು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

ಈ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ 25ರಷ್ಟನ್ನು ಆರ್‌ಟಿಇ ಕೋಟಾ ಮೂಲಕ ತುಂಬಲಾಗುತ್ತದೆ.ಎಲ್‌ಕೆಜಿ ಅಥವಾ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶವಿದ್ದು, ಅಂತಹ ಮಕ್ಕಳ ಶಿಕ್ಷಣ ಶುಲ್ಕವನ್ನು 8ನೇ ತರಗತಿವರೆಗೆ ಸರ್ಕಾರವೇ ಭರಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ ₹ 800 ಕೋಟಿಯಷ್ಟು ವೆಚ್ಚ ಮಾಡುತ್ತಿದೆ.

ಇದು ಒಂದೆಡೆ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೆ ಮತ್ತೊಂದೆಡೆ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ, ಖಾಸಗಿ ಶಾಲೆಗಳಿಗೆ ನೀಡುತ್ತಿರುವ ಹಣದಲ್ಲೇ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವುಗಳನ್ನು ಬಲಪಡಿಸಲು ಮುಂದಾಗಿದೆ.

ವಾರ್ಡ್‌ ವ್ಯಾಪ್ತಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ) ಎಷ್ಟೇ ವಾರ್ಡ್‌ಗಳು ಇದ್ದರೂ, ಅವುಗಳನ್ನು ಒಂದೇ ವಾರ್ಡ್‌ ಎಂದು ಪರಿಗಣಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ನೆರೆಹೊರೆ ವ್ಯಾಪ್ತಿ ಕಂದಾಯ ಗ್ರಾಮಕ್ಕೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಸೀಮಿತವಾಗಿರುತ್ತದೆ.

ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲೂಸರ್ಕಾರಿ ಶಾಲೆಗಳು ಇವೆ. ಕೆಲವೊಂದು ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು ಇಲ್ಲ. ಅಂತಹ ಕಡೆ ಖಾಸಗಿ ಶಾಲೆ ಇದ್ದರೆ, ಆರ್‌ಟಿಇ ಅಡಿ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು.

ಪೋಷಕರೇ ಭರಿಸಬೇಕು:ಕೇರಳ, ತೆಲಂಗಾಣದಲ್ಲಿ ಈ ಕಾಯ್ದೆಯನ್ನು ಸರಿಯಾಗಿ ಜಾರಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಹಿಂದೆ ಮಾಡಿದ್ದ ತಪ್ಪನ್ನು ಈಗಲಾದರೂ ಸರಿಪಡಿಸಿಕೊಂಡಿರುವುದು ಒಳ್ಳೆಯದು. ಆರ್‌ಟಿಇ ಕಾಯ್ದೆಯ ಸೆಕ್ಷನ್‌ 8,9ರ ಪ್ರಕಾರ ಸರ್ಕಾರಿ, ಅನುದಾನಿತ ಶಾಲೆ ಇದ್ದರೂ, ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅವರ ಶುಲ್ಕವನ್ನು ಪೋಷಕರೇ ಭರಿಸಬೇಕಾಗುತ್ತದೆ ಎಂದು ಶಿಕ್ಷಣ ತಜ್ಞವಿ.ಪಿ.ನಿರಂಜನಾರಾಧ್ಯ ಅವರು ತಿಳಿಸಿದರು.

***

ಖಾಸಗಿ ಶಾಲೆಗಳಿಗೆ ವಾರ್ಷಿಕ ₹ 800 ಕೋಟಿ ನೀಡುತ್ತಿದ್ದು, ಆ ಹಣವನ್ನು ಸರ್ಕಾರಿ ಶಾಲೆಗಳ ಸುಧಾರಣೆಗೆ ಬಳಸುವ ಮೂಲಕ ಅಲ್ಲಿನ 40 ಲಕ್ಷಕ್ಕೂ ಅಧಿಕ ಮಕ್ಕಳ ಭವಿಷ್ಯವನ್ನು ರೂಪಿಸುತ್ತೇವೆ.

- ಎಸ್‌.ಆರ್‌.ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

ಆರ್‌ಟಿಇ ಕಾಯ್ದೆಯ ಸೆಕ್ಷನ್‌ 3ರ ಪ್ರಕಾರ ವಾರ್ಡ್‌ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ, ಖಾಸಗಿ ಶಾಲೆಯಲ್ಲಿ ಆರ್‌ಟಿಇ ಕೋಟಾ ಇರುವುದಿಲ್ಲ. ಹಿಂದೆ ಆಗಿದ್ದ ತಪ್ಪನ್ನು ಸರ್ಕಾರ ಈಗ ಸರಿಪಡಿಸಿದೆ.

- ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.