ADVERTISEMENT

ಗ್ರಾಮಾಂತರ ಪ್ರದೇಶಗಳಲ್ಲಿ ವೈ–ಫೈ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 15:50 IST
Last Updated 26 ಫೆಬ್ರುವರಿ 2026, 15:50 IST
   

ಬೆಂಗಳೂರು: ರಾಜ್ಯದ ಕೆಲವು ದುರ್ಗಮ ಪ್ರದೇಶಗಳಲ್ಲಿ ವೈ–ಫೈ ಸೌಲಭ್ಯ ಕಲ್ಪಿಸುವ ಉದ್ದೇಶದ ಯೋಜನೆಗೆ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಬೆಂಗಳೂರಿನಲ್ಲಿ ಗುರುವಾರ ಚಾಲನೆ ನೀಡಿದರು.

ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಯಾಣ ಹಾಗೂ ಸಹಸ್ರಲಿಂಗದಲ್ಲಿ ಸಾರ್ವಜನಿಕ ವೈ–ಫೈ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಎನ್‌ಎ ಇಂಡಿಯಾ ಕಂಪನಿಯ ಸಿಇಒ ನಾಗರಾಜ ಮುನಿದಾಸಪ್ಪ ತಿಳಿಸಿದರು. ಈ ಕಂಪನಿಯು ಯೋಜನೆಯ ಅಡಿಯಲ್ಲಿ ವೈ–ಫೈ ಕೇಂದ್ರಗಳನ್ನು ಆರಂಭಿಸುತ್ತಿದೆ.

‘ಆರಂಭಿಕ ಹೆಜ್ಜೆಯಾಗಿ ನಾವು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಯಾಣ ಹಾಗೂ ಸಹಸ್ರಲಿಂಗದಲ್ಲಿ ಈ ಸೌಲಭ್ಯ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸಲಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ, ಇಂಟರ್ನೆಟ್‌ ಇನ್ನೂ ತಲುಪಿಲ್ಲದ ಸ್ಥಳಗಳನ್ನು ಗುರುತಿಸಿ ಅಲ್ಲಿ ವೈ–ಫೈ ಸೌಲಭ್ಯ ಆರಂಭಿಸಲಾಗುವುದು’ ಎಂದು ನಾಗರಾಜ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವೈ–ಫೈ ಸೌಲಭ್ಯ ಕಲ್ಪಿಸಲು ಜಿಎನ್‌ಎ ಕಂಪನಿಯು ಬಿಎಸ್‌ಎನ್‌ಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಇಂಟರ್ನೆಟ್‌ ಸೌಲಭ್ಯ ಇಲ್ಲವೆಂದಾದರೆ ಅಲ್ಲಿ ಯುಪಿಐ ಪಾವತಿಯಿಂದ ಆರಂಭಿಸಿ ಇಂಟರ್ನೆಟ್‌ ಆಧಾರಿಸಿದ ಯಾವ ಅನುಕೂಲಗಳೂ ಲಭ್ಯವಾಗುವುದಿಲ್ಲ. ಹೀಗಾಗಿ ಈ ಯೋಜನೆ ಆರಂಭಿಸಲಾಗಿದೆ ಎಂದು ನಾಗರಾಜ ಹೇಳಿದರು.

‘ನಮ್ಮ ಭಾಗದ ಗ್ರಾಮಾಂತರ ಪ್ರದೇಶಗಳನ್ನು ಈ ಯೋಜನೆಯು ಇಂಟರ್ನೆಟ್‌ ಜಾಲದ ಜೊತೆ ಬೆಸೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಸೌಲಭ್ಯ ಸಿಗುವ ಪರಿಣಾಮವಾಗಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಹೆಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.