ADVERTISEMENT

ಎಸ್‌.ಕೆ. ಬಸವರಾಜನ್‌ ಜೈಲಿನಿಂದ ಬಿಡುಗಡೆ: ಹೂಮಾಲೆ ಹಾಕಿ ಸ್ವಾಗತಿಸಿದ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 13:47 IST
Last Updated 27 ಡಿಸೆಂಬರ್ 2022, 13:47 IST
ಚಿತ್ರದುರ್ಗ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಬೆಂಬಲಿಗರು.
ಚಿತ್ರದುರ್ಗ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಬೆಂಬಲಿಗರು.   

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲು ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಹಾಗೂ ಷಡ್ಯಂತ್ರ ರೂಪಿಸಿದ ಆರೋಪದಡಿ ಬಂಧಿತರಾಗಿದ್ದ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಜಾಮೀನಿನ ಮೇಲೆ ಮಂಗಳವಾರ ಜೈಲಿನಿಂದ ಬಿಡುಗಡೆಯಾದರು.

ಕಾರಾಗೃಹದ ಮುಂಭಾಗ ಸೇರಿದ್ದ ಬಸವರಾಜನ್‌ ಬೆಂಬಲಿಗರು ಅದ್ದೂರಿ ಸ್ವಾಗತ ಕೊರಿದರು. ಹೂಮಾಲೆ ಹಾಕಿ ಅವರನ್ನು ಹೆಗಲ ಮೇಲೆ ಹೊತ್ತು ಜೈಕಾರ ಕೂಗಿದರು. ಕಾರಾಗೃಹದಿಂದ ನೇರವಾಗಿ ಮುರುಘಾ ಮಠಕ್ಕೆ ಭೇಟಿ ನೀಡಿದ ಬಸವರಾಜನ್‌, ಮುರುಗಿ ಶಾಂತವೀರ ಸ್ವಾಮೀಜಿ ಕರ್ತೃ ಗದ್ದುಗೆಯ ದರ್ಶನ ಪಡೆದರು.

ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾದ ಎರಡನೇ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದಲ್ಲಿ ನ.10ರಂದು ಬಸವರಾಜನ್‌ ಬಂಧಿಸಲಾಗಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿತ್ತು. ಡಿ.22ರಂದು ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು.

ADVERTISEMENT

‘ಈ ಪ್ರಕರಣ ಜೀವನಕ್ಕೆ ಹೊಸ ತಿರುವು ನೀಡಿದೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಯಲಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದೇನೆ. ಶಾಸಕನಾಗಿ ಆಯ್ಕೆಯಾಗಿ ಕಾರಾಗೃಹದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಬಸವರಾಜನ್‌ ಸುದ್ದಿಗಾರರಿಗೆ ತಿಳಿಸಿದರು.

‘ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ ಸರ್ಕಾರದ ನಿರ್ಧಾರ ಸರಿ ಇದೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಕಾಯುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

***

ಭೇಟಿ ಮಾಡುವ ಇಂಗಿತವನ್ನು ಶಿವಮೂರ್ತಿ ಶರಣರು ವ್ಯಕ್ತಪಡಿಸಿದ್ದರು. ಇದಕ್ಕೆ ಹೆಚ್ಚು ಆಸಕ್ತಿ ತೋರಲಿಲ್ಲ. ಕಾರಾಗೃಹದ ಅಧಿಕಾರಿಗಳು ಇದಕ್ಕೆ ಆಸ್ಪದ ನೀಡಲಿಲ್ಲ.
-ಎಸ್‌.ಕೆ.ಬಸವರಾಜನ್‌, ಮಾಜಿ ಆಡಳಿತಾಧಿಕಾರಿ,ಮುರುಘಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.