
ರಾಮನಗರ: ‘ವೃಕ್ಷಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ (114) ಅವರು ವಯೋಸಹಜ ಕಾಯಿಲೆಯಿಂದಾಗಿ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರಾಗಿರುವ ತಿಮ್ಮಕ್ಕ ಅವರಿಗೆ ಪುತ್ರ ಪರಿಸರವಾದಿ ಉಮೇಶ್ ಬಳ್ಳೂರು (ಸಾಕಮಗ) ಇದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಆಗಾಗ ಏರುಪೇರಾಗುತ್ತಿತ್ತು.
ಅದರಂತೆ, ಅವರನ್ನು ಎರಡು ದಿನಗಳ ಹಿಂದೆ ಉಸಿರಾಟದ ತೀವ್ರ ಸಮಸ್ಯೆಯಿಂದಾಗಿ ಅವರನ್ನು ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಮಕ್ಕಳಿರಲಿಲ್ಲ. ಆ ಕೊರಗು ಮರೆಯಲು ತಿಮ್ಮಕ್ಕ ಅವರು ತಮ್ಮೂರಿನ ರಸ್ತೆ ಬದಿ ಗಿಡಗಳನ್ನು ನೆಟ್ಟರು. ಅವುಗಳನ್ನೇ ತಮ್ಮ ಮಕ್ಕಳೆಂದು ನಿತ್ಯ ನೀರು ಹಾಕಿ, ದನಕರುಗಳು ತಿನ್ನದಂತೆ ನೋಡಿಕೊಂಡು ಪೋಷಿಸಿದರು. ಆ ಗಿಡಗಳೀಗ ದೊಡ್ಡ ಮರಗಳಾಗಿ ಬೆಳೆದು ನಿಂತಿವೆ.
ಗಿಡಗಳನ್ನು ಮಕ್ಕಳಂತೆ ಕಂಡು ಪೋಷಿಸಿ ಬೆಳೆಸಿದ್ದ ತಿಮ್ಮಕ್ಕ ಅವರ ಸಾಧನೆಗೆ 2019ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿ ಸೇರಿದಂತೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಹಲವು ಪ್ರಶಸ್ತಿಗಳು, ಪುರಸ್ಕಾರಗಳು ಹಾಗೂ ಬಿರುದುಗಳು ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.