ADVERTISEMENT

ಶಬರಿಮಲೆ: ರಾಜ್ಯದ ಯಾತ್ರಿಗಳಿಗೆ ಭದ್ರತೆ ಕೋರಿ ಕೇರಳ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 15:15 IST
Last Updated 19 ನವೆಂಬರ್ 2025, 15:15 IST
<div class="paragraphs"><p>ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಮಂಗಳವಾರ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರ ದಂಡು </p></div>

ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಮಂಗಳವಾರ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರ ದಂಡು

   

–ಪಿಟಿಐ ಚಿತ್ರ

ಬೆಂಗಳೂರು: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯುವಲ್ಲಿ ನೂಕುನುಗ್ಗಲು ಉಂಟಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ, ‘ಕರ್ನಾಟಕದಿಂದ ಬರುವ ಮಾಲಾಧಾರಿಗಳ ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಿ’ ಎಂದು ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ADVERTISEMENT

ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಎ.ಜಯತಿಲಕ್‌ ಅವರಿಗೆ ಬುಧವಾರ ಪತ್ರ ಬರೆದಿರುವ ಶಾಲಿನಿ ರಜನೀಶ್‌, ‘ಕರ್ನಾಟಕದಿಂದ ಪ್ರತಿ ವರ್ಷ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷವೂ ಲಕ್ಷಾಂತರ ಮಂದಿ ಬರಲಿದ್ದಾರೆ. ರಾಜ್ಯದ ಮಾಲಾಧಾರಿಗಳು ಬಳಸುವ ಮಾರ್ಗಗಳಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿಕೊಡಿ’ ಎಂದು ಕೋರಿದ್ದಾರೆ.

‘ತುರ್ತು ಸಂದರ್ಭಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕೆ ಆಂಬುಲೆನ್ಸ್‌, ವೈದ್ಯಕೀಯ ಸೇವೆಯನ್ನು ಒದಗಿಸಿಕೊಡಿ. ರಾಜ್ಯದ ಯಾತ್ರಾರ್ಥಿಗಳ ಸಂಪರ್ಕಕ್ಕೆ ನೆರವಾಗುವಂತೆ ಕರ್ನಾಟಕದ ಅಧಿಕಾರಿಗಳೊಂದಿಗೆ ವ್ಯವಹರಿಸಲು ಕೇರಳ ಸರ್ಕಾರದ ಕಡೆಯಿಂದ ಅಧಿಕಾರಿಯನ್ನು ನೇಮಿಸಿ. ಯಾತ್ರೆಯು ಸುಗಮವಾಗಿ ನಡೆಯಲು ನಮ್ಮಿಂದ ಪೂರ್ಣ ಸಹಕಾರ ದೊರೆಯಲಿದೆ. ನಿಮ್ಮಿಂದಲೂ ಅಗತ್ಯ ಸಹಕಾರವನ್ನು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.