ADVERTISEMENT

ನಿಗದಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಯುವುದು ಅನುಮಾನ: ಮಹೇಶ ಜೋಶಿ

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕಸಾಪ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 11:44 IST
Last Updated 3 ಅಕ್ಟೋಬರ್ 2022, 11:44 IST
ಮಹೇಶ ಜೋಶಿ
ಮಹೇಶ ಜೋಶಿ   

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ ಸರ್ಕಾರ ಮತ್ತು ಕಸಾಪ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ನಿಗದಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯವಿಲ್ಲ. ಈ ಬೆಳವಣಿಗೆಯಿಂದ ನೋವಾಗಿದ್ದು ವಿಷಾದ ವ್ಯಕ್ತಪಡಿಸುವುದಾಗಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದರು.

ಹಾವೇರಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ವಿಚಾರದಲ್ಲಿ ರಾಜ್ಯ ಸರ್ಕಾರದ ಅಸಹಕಾರದ ನಡೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಹಾವೇರಿ ನಗರದಲ್ಲಿ ನವೆಂಬರ್ 11, 12,13ರಂದು ಸಮ್ಮೇಳನದ ದಿನಾಂಕ ನಿಗದಿಯಾಗಿತ್ತು. ಆದರೆ, ಈ ದಿನಾಂಕಕ್ಕೆ ಸಮ್ಮೇಳನ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ಮೂಡುತ್ತಿದೆ. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು "ಪೂರ್ವ ಸಿದ್ಧತೆ ಆಗಿಲ್ಲ, ಸಮ್ಮೇಳನ ಮುಂದಕ್ಕೆ ಹೋಗಬಹುದು" ಎಂದು ಹೇಳಿದ್ದಾರೆ.

ADVERTISEMENT

ಆದರೆ, ಎರಡು ದಿನ‌ಗಳ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಿಗದಿತ ದಿನಾಂಕದಂದೇ ಸಮ್ಮೇಳನ ಮಾಡುತ್ತೇವೆ ಎಂದಿದ್ದಾರೆ. ಈ ಗೊಂದಲಗಳು ನಮಗೆಲ್ಲ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದರು.

ಅನಿಶ್ಚಿತತೆ ಕಾಡುತ್ತಿದೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ ಮಾಡುವಂಥದ್ದು ಸಾಹಿತ್ಯ ಪರಿಷತ್ ಅಧ್ಯಕ್ಷರು. ಅಲ್ಲದೆ ಮುಖ್ಯಮಂತ್ರಿಗಳು ಇದೇ (ಹಾವೇರಿ) ಜಿಲ್ಲೆಯವರು. ನಾನು ಇದೇ ಜಿಲ್ಲೆಯವನು. ಈ ಕಾರಣಕ್ಕೆ ದಿನಾಂಕ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದೆ. ನಾಲ್ಕು ಬಾರಿ ಸಭೆ ನಡೆಸುವಂತೆ ಮನವಿ ಮಾಡಿದ್ದೆ. ಆದರೆ, ಸಹಕಾರ ಸಿಗಲಿಲ್ಲ. ದಿನಾಂಕ ಘೋಷಣೆ ಮಾಡಿದ‌ ಮೇಲೆ ಲಾಂಛನ ಬಿಡುಗಡೆ ಆಗಬೇಕಿತ್ತು‌ ಹಲವು ಸಮಿತಿಗಳ ರಚನೆ ಆಗಬೇಕಿತ್ತು. 20 ಸಮಿತಿಗಳನ್ನು ಮಾಡುವಂತೆ ಹೇಳಿದ್ದರೂ ಮಾಡಿಲ್ಲ. ನಮಗೆ ಈಗ ಅನಿಶ್ಚಿತತೆ ಕಾಡುತ್ತಿದೆ. ಇದುವರೆಗೆ ಪ್ರತಿನಿಧಿಗಳ ನೋಂದಣಿಯಾಗಿಲ್ಲ. ಪ್ರತಿನಿಧಿಗಳ ನೋಂದಣಿಗೆ ಒಂದು ತಿಂಗಳು ಬೇಕು. ಹೀಗಾಗಿ ಈ ಬೆಳವಣಿಗೆಯಿಂದ ತುಂಬ ಬೇಸರವಾಗಿದೆ, ದು:ಖ ತಂದಿದೆ ಎಂದರು.

ಕಸಾಪ ಅಧ್ಯಕ್ಷರ ಕಡೆಗಣನೆ

ಹಲವು ಸಲ ನಾನು ಪತ್ರ ಬರೆದಾಗ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡುತ್ತಾರೆ. ಮೈಸೂರು ದಸರಾ ಆಚರಣೆಯಲ್ಲಿ ಸಾಹಿತ್ಯ ಪರಿಷತ್ತು ಅಧ್ಯಕ್ಷರನ್ನ ಪಕ್ಕಕ್ಕೆ ತಳ್ಳಿದ್ರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕಸಾಪ ಅಧ್ಯಕ್ಷರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಮನೆ ಕಾಯುವ ಅಧ್ಯಕ್ಷನಲ್ಲ

ಸಮ್ಮೇಳನ ನಡೆಯೊತ್ತೋ ಇಲ್ಲವೋ ಎನ್ನುವುದನ್ನು ಮೂಕನಾಗಿ ನೋಡುವ ಸ್ಥಿತಿ ಬಂದಿದೆ. ಈ ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ, ₹20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಒಂದು ಪೈಸೆ ಬಂದಿಲ್ಲ. ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ, ಸ್ವಾಭಿಮಾನ ಬಿಟ್ಟು ಹೋಗಲ್ಲ ಎಂದು ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.