
ಬೆಂಗಳೂರು: ‘ಕಾನೂನಿನ ಮುದ್ರಿತ ಅಕ್ಷರಗಳು ಸಾಂವಿಧಾನಿಕ ತಿದ್ದುಪಡಿ ಪಡೆಯುವತನಕ ಅವು ಹೇಗಿರುತ್ತವೆಯೊ ಹಾಗೆಯೇ ಇರುತ್ತವೆಯಾದರೂ, ಅವುಗಳನ್ನು ಉಚ್ಚರಿಸುವ ಭಾವ ಮತ್ತು ಬಗೆ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಇದು ಜೀವನದಲ್ಲಿ ಏರಿಳಿತಗಳಿರಬೇಕು ಎಂಬುದರ ಸಾತ್ವಿಕ ಪ್ರತೀಕ...!
ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಪರಾಧಿಗಳಾದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಇತರರು ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮೇಲ್ಮನವಿದಾರ ಮಹೇಶ್ ಜೆ.ಬಿಳಿಯೆ (ಪ್ರಕರಣ ದಾಖಲಾಗಿದ್ದ ಸಮಯದಲ್ಲಿ ಪೋರ್ಟ್ ಕನ್ಸರ್ವೇಟರ್ ಆಗಿದ್ದರು) ಪರ ವಾದ ಮಂಡಿಸಿದ ಹೈಕೋರ್ಟ್ ಹಿರಿಯ ವಕೀಲ ನಾಗೇಂದ್ರ ನಾಯಕ್ ಅವರು ಶಾಸಕ ಸತೀಶ್ ಸೈಲ್ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರ ವಾದಾಂಶಗಳನ್ನು ಅನುಮೋದಿಸಿದರು.
‘ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಮೇಲ್ಮನವಿದಾರರನ್ನು ಉಳಿದ ಆರೋಪಿಗಳಿಂದ ಪ್ರತ್ಯೇಕಿಸಿ ವಿಚಾರಣೆ ನಡೆಸಿದೆ. ವಾಸ್ತವದಲ್ಲಿ ಎಲ್ಲರ ಜಂಟಿ ವಿಚಾರಣೆ ಆಗಬೇಕಿತ್ತು’ ಎಂಬ ತಾಂತ್ರಿಕ ಅಂಶವನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಜಂಟಿ ವಿಚಾರಣೆ ಅಗತ್ಯವಿಲ್ಲ ಎಂಬುದು ಸ್ಥಾಪಿತ ಕಾನೂನು. ಹಿರಿಯ ವಕೀಲರು ಹೇಳುತ್ತಿರುವುದನ್ನು ನೋಡಿದರೆ ಆಲಿ ಬಾಬಾ ಮತ್ತು ನಲವತ್ತು ಕಳ್ಳರ ಕಥೆಯನ್ನು ನೆನಪಿಗೆ ತರುತ್ತಿದೆ. ಎಷ್ಟೇ ಭಿನ್ನ ಅಥವಾ ಎತ್ತರದ ದನಿಯಲ್ಲಿ ಕಾನೂನನ್ನು ವಿಶ್ಲೇಷಿಸಿದರೂ ಅದರ ಅರ್ಥ ಒಂದೇ ಆಗಿರುತ್ತದೆ. ಅದು ಬದಲಾಗುವುದಿಲ್ಲ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಯವರು, ‘ಜೀವನದಲ್ಲಿ ಏರಿಳಿತಗಳಿರಬೇಕು’ ಎಂದು ಸಿಬಿಐ ಅನ್ನು ಕುಟುಕಿದರಲ್ಲದೆ ಅಂತಿಮ ಆದೇಶವನ್ನು ಕಾಯ್ದಿರಿಸಿದರು. ಪ್ರಕರಣದಲ್ಲಿ ಆರು ಜನರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಕಠಿಣ ಜೈಲು ಶಿಕ್ಷೆಯನ್ನು ಹೈಕೋರ್ಟ್ ಈಗಾಗಲೇ ಅಮಾನತ್ತಿನಲ್ಲಿ ಇರಿಸಿದೆ. ಸೈಲ್ ಪರ ಹೈಕೋರ್ಟ್ ವಕೀಲ ಎಸ್.ಸುನಿಲ್ ಕುಮಾರ್ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.