ADVERTISEMENT

ಉಪ್ಪು ತಿಂದವರು ನೀರು ಕುಡಿದಿದ್ದಾರೆಯೆ: ಸಿದ್ದರಾಮಯ್ಯ ವಿರುದ್ಧ ಬೇಗ್ ವಾಗ್ದಾಳಿ

ಮತ್ತೆ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST
   

ಬೆಂಗಳೂರು: ‘ಪಕ್ಷದಲ್ಲಿ ಉಪ್ಪು ತಿಂದವರೆಲ್ಲ ನೀರು ಕುಡಿದಿದ್ದಾರೆಯೆ’ ಎಂದು ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವಶಿವಾಜಿನಗರ ಶಾಸಕ ರೋಷನ್‌ ಬೇಗ್ ಪ್ರಶ್ನಿಸುವ ಮೂಲಕ ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ,‘ಉಪ್ಪು ತಿಂದವರು ನೀರು ಕುಡಿಯಬೇಕು’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತುಮಕೂರು ಜಿಲ್ಲೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಶಾಸಕ ರಮೇಶ್ ಜಾರಕಿಹೊಳಿ ಉಪ್ಪು ತಿಂದಿಲ್ಲವೆ. ಇವರೆಲ್ಲ ನೀರು ಕುಡಿದಿದ್ದಾರೆಯೆ ಎಂದು ಪ್ರಶ್ನಿಸಿದರು. ಮುಖಂಡರ ವಿರುದ್ಧ ಹೇಳಿಕೆ ನೀಡಿದ್ದರೂ ಸಿದ್ದರಾಮಯ್ಯ ಅವರ ಬೆಂಬಲಿಗರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದರು.

ADVERTISEMENT

‘ನಾನು ಸತ್ಯ ಹೇಳಿದ್ದಕ್ಕೆ ಪಕ್ಷದಿಂದ ಅಮಾನತು ಮಾಡುವ ಶಿಕ್ಷೆ ನೀಡಿದ್ದಾರೆ. ಸತ್ಯ ಹೇಳುವುದು ಅಪರಾಧವಾಗಿದೆ.ಈಗಲೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಕಾಂಗ್ರೆಸ್‌ನ ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯವನ್ನಷ್ಟೇ ಹೇಳಿದ್ದೇನೆ. ಪಕ್ಷಕ್ಕೆ ಇಂಥಸ್ಥಿತಿಬಂತಲ್ಲ ಎಂಬ ನೋವಿನಿಂದ ಸತ್ಯ ತಿಳಿಸಿದ್ದೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಹ ಅಮಾನತು ಮಾಡುವಂತೆ ಒತ್ತಡ ಹಾಕಿರಬಹುದು’ ಎಂದು ತಿಳಿಸಿದರು.

ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಆರ್.ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ, ಕೆ.ಎಚ್.ಮುನಿಯಪ್ಪ ಇತರ ಹಿರಿಯ ನಾಯಕರನ್ನು ಭೇಟಿಮಾಡಿ ಚರ್ಚಿಸಲಾಗುವುದು. ದೆಹಲಿ ಮಟ್ಟದ ನಾಯಕರ ಜತೆಗೂ ಮಾತುಕತೆ ನಡೆಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಪಕ್ಷ ಗೆದ್ದಿದೆ. ರಾಜ್ಯ ನಾಯಕರ ವಿರುದ್ಧ ಮಾಡಿರುವ ಟೀಕೆಯಲ್ಲಿ ಸತ್ಯಾಂಶವಿದೆ.ಪಕ್ಷ ಹಾಗೂ ಮುಖಂಡರನ್ನು ಟೀಕಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರನ್ನು ಕಾಂಗ್ರೆಸ್ ಮುಖಂಡರು ನೇರವಾಗಿ ಬೆಂಬಲಿಸಿದ್ದು, ತುಮಕೂರಿನಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಬಲಿಕೊಟ್ಟರು. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋಲಿಗೆ ನಾವೇ ಕಾರಣ ಎಂದು ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಪಕ್ಷದಲ್ಲಿ ಶಿಸ್ತು ತರಲು ಅಮಾನತು’

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಾಸಕ ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ಎಲ್ಲರೂ ಪಕ್ಷದ ಶಿಸ್ತಿಗೆ ಒಳಪಡಬೇಕು. ಇದು ಇತರ ನಾಯಕರಿಗೂ ಎಚ್ಚರಿಕೆಯ ಸಂದೇಶವಾಗಿದೆ. ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

* ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ಸಮಸ್ಯೆಯನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು

-ದಿನೇಶ್ ಗುಂಡೂರಾವ್,ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.