ADVERTISEMENT

‘ರಕ್ತಚಂದನ’ ಮಾಫಿಯಾ ಸೂತ್ರಧಾರರ ಸೆರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:37 IST
Last Updated 5 ಜನವರಿ 2019, 20:37 IST
ಜಪ್ತಿ ಮಾಡಿದ ಹಣ, ಆಭರಣಗಳೊಂದಿಗೆ ಡಿಸಿಪಿ ಡಿ.ದೇವರಾಜ್
ಜಪ್ತಿ ಮಾಡಿದ ಹಣ, ಆಭರಣಗಳೊಂದಿಗೆ ಡಿಸಿಪಿ ಡಿ.ದೇವರಾಜ್   

ಬೆಂಗಳೂರು: ಹೊಸಕೋಟೆ ತಾಲ್ಲೂಕಿನ ಕಟ್ಟಿಗೇಹಳ್ಳಿಯಲ್ಲಿ ತಮ್ಮದೇ ಕೋಟೆ ಕಟ್ಟಿಕೊಂಡು ‘ರಕ್ತಚಂದನ ಮಾಫಿಯಾ’ ನಡೆಸುತ್ತಿದ್ದ ತಂದೆ–ಮಗನನ್ನು 150ಕ್ಕೂ ಹೆಚ್ಚು ಪೊಲೀಸರು ಶಸ್ತ್ರಸಜ್ಜಿತರಾಗಿ ಹೋಗಿ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ವಿಧಾನಸೌಧ, ರಾಜಭವನ, ಹೈಕೋರ್ಟ್ ಸುತ್ತಮುತ್ತಲ ಸೂಕ್ಷ್ಮ ಪ್ರದೇಶಗಳಲ್ಲೇ ರಕ್ತಚಂದನದ ಮರಗಳು ಕಳವಾಗಿದ್ದವು. ಈ ಪ್ರಕರಣ
ಗಳ ಬೆನ್ನುಹತ್ತಿದ ಕೇಂದ್ರ ವಿಭಾಗದ ಪೊಲೀಸರ ತಂಡ, ಕಬ್ಬನ್‌ಪಾರ್ಕ್‌ನಲ್ಲಿ ಕಾಲಿಗೆ ಗುಂಡು ಹೊಡೆದು ಆರು ಆರೋಪಿಗಳನ್ನು ಬಂಧಿಸಿತ್ತು. ಅವರ ವಿಚಾರಣೆ ನಡೆಸಿದಾಗ ಸೈಯದ್ ರಿಯಾಜ್ ಹಾಗೂ ಆತನ ಮಗ ಸೈಯದ್ ಷೇರ್ ಅಲಿಯ ಹೆಸರು ಹೊರಬಿದ್ದಿತ್ತು.

ರಿಯಾಜ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಕುಟುಂಬ ಎರಡು ದಶಕಗಳಿಂದಲೂ ಗಂಧದ ಮರ ಕಳವು ದಂಧೆಯಲ್ಲಿ ತೊಡಗಿದೆ. ಕಟ್ಟಿಗೇಹಳ್ಳಿ ಗ್ರಾಮದ ಬಹುತೇಕರೂ, ಈ ಮಾಫಿಯಾಗೆ ಕೈ ಜೋಡಿಸಿದ್ದಾರೆ. ಇದರಿಂದಾಗಿ ತಂದೆ–ಮಗನನ್ನು ಬಂಧಿಸಲು ಪೊಲೀಸರು ಹಳ್ಳಿಯೊಳಗೆ ಕಾಲಿಟ್ಟರೆ, ಸ್ಥಳೀಯರೇ ಗೆರಿಲ್ಲಾ ಮಾದರಿಯಲ್ಲಿ ದಾಳಿ ನಡೆಸಿ ಓಡಿಸುತ್ತಾರೆ. ವಾರದ ಹಿಂದೆ ನಾಲ್ವರು ಪಿಎಸ್‌ಐಗಳೂ ಗ್ರಾಮಸ್ಥರಿಂದ ಹಲ್ಲೆಗೆ ಒಳಗಾಗಿದ್ದರು.

ADVERTISEMENT

ಈ ಬಗ್ಗೆ ಅರಿತಿದ್ದ ಕೇಂದ್ರ ವಿಭಾಗದ ಪೊಲೀಸರು, ಶುಕ್ರವಾರ ರಾತ್ರಿ ಶಸ್ತ್ರಾಸ್ತ್ರಗಳ ಸಮೇತ 150 ಸಿಬ್ಬಂದಿಯೊಂದಿಗೆ ಏಕಾಏಕಿ ಗ್ರಾಮಕ್ಕೆ ನುಗ್ಗಿದ್ದಾರೆ. ಮನೆ ಶೋಧ ನಡೆಸಿ 9 ಕೆ.ಜಿ ಗಂಧದ ಮರದ ಚಕ್ಕೆಗಳು, ₹ 35 ಲಕ್ಷ ನಗದು ಹಾಗೂ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿ, ತಂದೆ–ಮಗನನ್ನೂ ಬಂಧಿಸಿ ಕರೆತಂದಿದ್ದಾರೆ.

* ರಿಯಾಜ್‌ ಮನೆಯಲ್ಲಿ ಮೂರು ಡೈರಿಗಳು ಸಿಕ್ಕಿದ್ದು, ಗಂಧದ ಮರಗಳನ್ನು ಮಾರಾಟ ಮಾಡಿರುವ ವಿವರಗಳು ಅದರಲ್ಲಿವೆ.

– ಡಿ. ದೇವರಾಜ್‌, ಡಿಸಿಪಿ, ಕೇಂದ್ರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.