ADVERTISEMENT

ಮೈಸೂರಿನಲ್ಲಿ ಭೈರಪ್ಪ ಸಾಹಿತ್ಯೋತ್ಸವ

ಜನವರಿ 19ರಿಂದ ಎರಡು ದಿನ ಆಯೋಜನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:53 IST
Last Updated 23 ಡಿಸೆಂಬರ್ 2018, 19:53 IST
ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಜನರೊಂದಿಗೆ ಮಾತುಕತೆ ನಡೆಸಿದರು -  –ಪ್ರಜಾವಾಣಿ ಚಿತ್ರ/ರಂಜು .ಪಿ
ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಜನರೊಂದಿಗೆ ಮಾತುಕತೆ ನಡೆಸಿದರು -  –ಪ್ರಜಾವಾಣಿ ಚಿತ್ರ/ರಂಜು .ಪಿ   

ಸಂತೇಶಿವರ: ಮೊದಲ ಬಾರಿಗೆ ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವ ಮೈಸೂರಿನಲ್ಲಿ ಜನವರಿ 19- 20ರಂದು ಮೈಸೂರಿನಲ್ಲಿ ನಡೆಯಲಿದೆ.

ಸಾಹಿತಿ ಎಸ್.ಎಲ್.‌ಭೈರಪ್ಪ ಅವರ ಸ್ವಗ್ರಾಮವಾದ ಹಾಸನ‌ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಶ್ರೀಮತಿ ಗೌರಮ್ಮ‌ ಸ್ಮಾರಕ ಟ್ರಸ್ಟ್ ವತಿಯಿಂದ ನಡೆದ ಯುವ ಬರಹಗಾರರ ಸಂವಾದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಯಿತು.

ಭೈರಪ್ಪನವರ ದ್ವಿತೀಯ ಪುತ್ರ ಉದಯಶಂಕರ ಅವರ ಪರಿಕಲ್ಪನೆ ಇದಾಗಿದ್ದು ನಾಡಿನ ಗಂಭೀರ ಸಾಹಿತ್ಯೋತ್ಸವವಾಗಿ ಗುರುತಿಸಿಕೊಳ್ಳಲಿದೆ. ವಿವರಗಳನ್ನು ಸದ್ಯದಲ್ಲೇ ಉದಯಶಂಕರ ಬಿಡುಗಡೆ ಮಾಡಲಿದ್ದಾರೆ.

ADVERTISEMENT

ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಭೈರಪ್ಪ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಗೌರಮ್ಮ ಸ್ಮಾರಕ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಶೇಖರ್ ತಿಳಿಸಿದರು.

ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಬಂದ 150ಕ್ಕೂ ಹೆಚ್ಚುಜನ ಸಾಹಿತ್ಯಾಸಕ್ತ ಯುವ ಬರಹಗಾರರು ಭಾಗವಹಿಸಿದ್ದರು.

ಕಾದಂಬರಿ ರಚನೆಗೆ ತತ್ವಶಾಸ್ತ್ರ, ಕಲೆ ಸಂಗೀತದ ಜ್ಞಾನದ ಅಗತ್ಯ, ಇಂದಿನ‌ ವಿಮರ್ಶೆ, ಕಲೆಯಾಗಿ ಹದಗೊಳ್ಳುವ ಕೃತಿ ಹೀಗೆ ಕಾದಂಬರಿ ರಚನೆಯ ಕುರಿತ ಕಾರ್ಯಾಗಾರದಂತೆ ಭೈರಪ್ಪ ಅವರ ವಿವರಣೆಗಳಿದ್ದುದು ವಿಶೇಷ.

ಭೈರಪ್ಪ ಹೇಳಿದ್ದು...

* ಎಡ- ಬಲ ಎಂಬ ಸಿದ್ಧಾಂತಕ್ಕೂ ಮೀರಿದ ಸಮಸ್ಯೆಗಳಿವೆ ಜೀವನದಲ್ಲಿ. ಅದನ್ನು ಕಾಣಲು ಉನ್ನತ ಮಟ್ಟದ ಚಿಂತನೆ ಬೇಕಾಗುತ್ತದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ.

* 'ಆವರಣ' ಕಾದಂಬರಿಗೆ 136 ಪುಸ್ತಕದ ರೆಫರೆನ್ಸ್ ಕೊಟ್ಟೆ. ತಂತ್ರ ಏನೆಂದರೆ ಬ್ಯಾನ್ ಆಗಬಹುದು ಎಂಬ ಊಹೆ ಇತ್ತು. ಯಾಕೆಂದರೆ ಸರ್ಕಾರದ ಇಂಟೆಲೆಕ್ಚುವಲ್ ತಿಳಿವಳಿಕೆ ಇಷ್ಟೇ...ಬ್ಯಾನ್ ಮಾಡುವುದು.

* ಶಬರಿಮಲೆ ವಿಷಯದಲ್ಲಿ ಕೋರ್ಟಿಗೆ ಹೋದರು. ಒಂದೊಂದು ದೇವಸ್ಥಾನಕ್ಕೆ ಒಂದು ಕತೆ, ಪರಂಪರೆ ಇರುತ್ತದೆ. ಮೈಸೂರಿನ‌ ಚಾಮುಂಡೇಶ್ವರಿ ಕತೆಯಲ್ಲಿ ಪುರುಷರ ವಿರುದ್ಧ ಅವಳ‌ ಜಯ ಆಗಿದೆ ಅಂತ ಪುರುಷರೆಲ್ಲ ಅನ್ಯಾಯ ಆಗಿದೆ ಅಂದರೆ ಹೇಗೆ? ಸಮಾನತೆ ಎನ್ನುವುದೊಂದು ಆದರ್ಶ, ಅದು ವಾಸ್ತವ ಅಲ್ಲ.

* ದೇವರು ಇದ್ದಾನೆ ಎನ್ನುವುದು ನನ್ನನ್ನು ಮೀರಿದ ಪ್ರಶ್ನೆ. ಹಾಗಾಗಿ ಈ ವಿಷಯದಲ್ಲಿ ನಾನು ಬಾಯಿಮುಚ್ಚಿಕೊಂಡು ಇರಬೇಕಾಗುತ್ತೆ.

* ಭಿತ್ತಿ ಬರೆದ ನಂತರದ ಬದುಕನ್ನು ದಾಖಲಿಸುವ ಯೋಚನೆ ಇಲ್ಲ. ಅಲ್ಲಿಯ
ವರೆಗಿನ‌ ಜೀವನ ಸಂಘರ್ಷ, ಬರೆದಾಗಿನ ಸನ್ನಿವೇಶ ಎಲ್ಲ ಬರೆದಾಗಿದೆ. ನಂತರ ನನ್ನ ಜೀವನದಲ್ಲಿ ಅಂಥ ಮುಖ್ಯವಾದುದೇನೂ ಘಟಿಸಿಲ್ಲ.

* ಈಗಿನ ಕವಿ, ಸಾಹಿತಿಗಳನ್ನು ಋಷಿ ಎಂದುಕೊಳ್ಳ ಬೇಡಿ.‌ ನಾವೆಲ್ಲ ಬರೀತೀವಿ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.