ADVERTISEMENT

ಸತೀಶ ಜಾರಕಿಹೊಳಿ ಆಸ್ತಿ ಶೇ. 250ರಷ್ಟು ಹೆಚ್ಚಳ, ಮಂಗಲಾ ಅಂಗಡಿ ಆಸ್ತಿ ಎಷ್ಟು?

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 3:26 IST
Last Updated 31 ಮಾರ್ಚ್ 2021, 3:26 IST
ಸತೀಶ ಜಾರಕಿಹೊಳಿ ಮತ್ತು ಮಂಗಲಾ ಸುರೇಶ ಅಂಗಡಿ
ಸತೀಶ ಜಾರಕಿಹೊಳಿ ಮತ್ತು ಮಂಗಲಾ ಸುರೇಶ ಅಂಗಡಿ   

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶಾಸಕ ಸತೀಶ ಜಾರಕಿಹೊಳಿ ಅವರ ಆಸ್ತಿಯು ಕಳೆದ 3 ವರ್ಷಗಳಲ್ಲಿ ಶೇ. 250ರಷ್ಟು ಹೆಚ್ಚಳವಾಗಿದೆ ಎಂದು ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿದು ಬಂದಿದೆ.

ಅಫಿಡವಿಟ್ ಪ್ರಕಾರ, ಸತೀಶ ಜಾರಕಿಹೊಳಿ ಮತ್ತು ಅವರ ಕುಟುಂಬದವರು ₹ 148 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರೇ ಘೋಷಿಸಿದಂತೆ ಅವರ ಆಸ್ತಿ ಮೌಲ್ಯ ₹ 42 ಕೋಟಿ ಆಗಿತ್ತು. ಇದೇವೇಳೆ, ತಾವು ಮತ್ತು ಕುಟುಂಬ ₹ 15 ಕೋಟಿ ಸಾಲ ಪಡೆದಿರುವುದಾಗಿ ಅವರು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ಸತೀಶ ಅವರು ₹ 13.62 ಕೋಟಿ ಚರಾಸ್ತಿ ಹಾಗೂ ₹ 113 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರಲ್ಲಿ ಸ್ವಯಾರ್ಜಿತ ಆಸ್ತಿಯ ಮೌಲ್ಯವೇ ₹ 121 ಕೋಟಿ ಆಗುತ್ತದೆ.

ADVERTISEMENT

ಯಮಕನ ಮರಡಿ ಶಾಸಕ ಸತೀಶ ಜಾರಕಿಹೊಳಿ, 1.38 ಕೋಟಿ ಆಭರಣ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೃಷಿ ಮತ್ತು ಕೃಷಿಯೇತರ ಜಮೀನುಗಳನ್ನು ಹೊಂದಿದ್ದು, ಕೃಷಿ ಮತ್ತು ಉದ್ಯಮವು ತಮ್ಮ ಆದಾಯದ ಮೂಲವೆಂದು ಘೋಷಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಮೃತಪಟ್ಟ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಸುರೇಶ ಅಂಗಡಿ ಅವರ ವಿರುದ್ಧ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಸೆಣೆಸುತ್ತಿದ್ದಾರೆ.

ಮಂಗಲಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ, ಅವರ ಆಸ್ತಿ ಮೌಲ್ಯ ₹ 14.77 ಕೋಟಿ ಮತ್ತು ಸುರೇಶ್ ಅಂಗಡಿಯವರ ಹೆಸರಿನಲ್ಲಿರುವ ಆಸ್ತಿ ಮೌಲ್ಯ 15.94 ಕೋಟಿ ಆಗಿದೆ. ಪತಿಯ ಆಸ್ತಿ ಮತ್ತು ಸಾಲಗಳು ವರ್ಗಾವಣೆಯ ಹಂತದಲ್ಲಿವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅವರಿಗೆ ₹ 7.55 ಕೋಟಿ ಸಾಲವಿದೆ ಎಂದು ಉಲ್ಲೇಖಿಸಲಾಗಿದೆ.

ಸುರೇಶ್ ಅಂಗಡಿ ಶಿಕ್ಷಣ ಪ್ರತಿಷ್ಠಾನ, ಶ್ರೀ ವಿಜಯಲಕ್ಷ್ಮಿ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮಂಗಲಾ ಭಾಗಿಯಾಗಿರುವ ಅಂಗಡಿ ಶುಗರ್ಸ್ ಮತ್ತು ಪವರ್ ಲಿಮಿಟೆಡ್‌ನ ಒಟ್ಟು ಆಸ್ತಿ ಮೌಲ್ಯ ₹ 106 ಕೋಟಿ ಆಗಿದೆ.. ಆದರೆ, ಈ ಸಂಸ್ಥೆಗಳ ಮೇಲೆ ₹ 91 ಕೋಟಿ ಸಾಲವಿದೆ.

ಮಂಗಲಾ ಅವರು ವಾಣಿಜ್ಯ ವಾಹನಗಳು ಸೇರಿ ₹ 64 ಲಕ್ಷ ಮೌಲ್ಯದ 30 ವಾಹನಗಳನ್ನು ಹೊಂದಿದ್ದಾರೆ. 1,600 ಗ್ರಾಂ ತೂಕದ ಆಭರಣಗಳು ಅವರ ಬಳಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.