ADVERTISEMENT

ದೇವಾಂಗ ನಿಗಮ ಸ್ಥಾಪಿಸದಿದ್ದರೆ ಸತ್ಯಾಗ್ರಹ: ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ

ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 17:34 IST
Last Updated 10 ಫೆಬ್ರುವರಿ 2021, 17:34 IST
ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ
ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ   

ಹೊಸದುರ್ಗ: ‘ದೇವಾಂಗ ಸಮಾಜಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 2ರಷ್ಟು ವಿಶೇಷ ಮೀಸಲಾತಿ ನೀಡಬೇಕು. ಆಂಧ್ರಪ್ರದೇಶ ಹಾಗೂ ಛತ್ತೀಸಗಡ ಮಾದರಿಯಲ್ಲಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಈ ಬೇಡಿಕೆ ಈಡೇರುವವರೆಗೂ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುತ್ತೇವೆ’ ಎಂದು ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಕ್ಕೊತ್ತಾಯದ ಬೃಹತ್‌ ಸಮಾವೇಶದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಲವು ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಹಾಗೂ ಅತ್ಯಂತ ಹಿಂದುಳಿದಿರುವ ದೇವಾಂಗ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸದಿರುವುದು ದುರದೃಷ್ಟಕರ‌. ನೇಯ್ಗೆ, ಕೂಲಿ, ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಸಮಾಜದ ಜನರ ಜೀವನ ದುಸ್ತರವಾಗಿದೆ. ‌ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಹೋರಾಟ ಆರಂಭಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದ 27 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದೇವೆ. ಇಂತಹ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು. ಬಜೆಟ್‌‌ ಅಧಿವೇಶನ ಮುಗಿಯುವುದರ ಒಳಗೆ ದೇವಾಂಗ ಸಮಾಜವನ್ನು ಹಿಂದುಳಿದ ಸಮಾಜವೆಂದು ಪರಿಗಣಿಸಿ ಶೇ 2ರಷ್ಟು ವಿಶೇಷ ಮೀಸಲಾತಿ ಕೊಡಬೇಕು. ‌ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶಿಫಾರಸು ಮಾಡಬೇಕು. ಮನವಿಗೆ ಸ್ಪಂದಿಸದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸ್ವಾಮೀಜಿಗಳಿಂದಲೇ ಜಾತಿಯ ಬೇಲಿ’

ತರೀಕೆರೆ: ‘ಸ್ವಾಮೀಜಿಗಳೇ ಜಾತಿಯ ಬೇಲಿ ಹಾಕಿಕೊಂಡರೆ ಕೀಳುವುದು ಯಾರು? ಬೇಡಿಕೆಗಳಿಗಾಗಿ ಸರ್ಕಾರವನ್ನು ಹೆದರಿಸುವುದು ಸರಿಯಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡೋಣ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಮನ ಆದರ್ಶಗಳು ನಮ್ಮದಾಗಲಿ. ರಾಮನಿಗೆ ಗುಡಿಯ ಅವಶ್ಯಕತೆಯಿಲ್ಲ. ಸ್ಥಾವರಗಳನ್ನು ಭದ್ರಗೊಳಿಸಿ ಜಂಗಮ ನಾಶಗೊಳಿಸುವ ಕ್ರಿಯೆ ಸರಿಯಲ್ಲ’ ಎಂದರು.

‘ಮೀಸಲಾತಿಗೆ ಒತ್ತಾಯಿಸಿ ಸ್ವಾಮಿಗಳು ರಸ್ತೆಗೆ ಇಳಿದಿದ್ದಾರೆ. ಎಲ್ಲರೂ ಹಿಂದುಳಿದವರ ಪಟ್ಟ ಕೇಳಿದರೆ ಮುಂದುವರಿದವರು ಯಾರು’ ಎಂದು ಪ್ರಶ್ನಿಸಿದ ಕಾಂಗ್ರೆಸ್ ಮಾಧ್ಯಮ ವಕ್ತಾರ ಬಿ.ಎಲ್.ಶಂಕರ್, ‘ಸಂವಿಧಾನ, ಸುಪ್ರೀಂ ಕೋರ್ಟ್‌ ತೀರ್ಪು ಹಾಗೂ ವಸ್ತುಸ್ಥಿತಿಯನ್ನು ಮುಂದಿಟ್ಟುಕೊಂಡು ಸಂವಾದ ಹಾಗೂ ಮಾತುಕತೆ ಸಾಣೇಹಳ್ಳಿ ಪಂಡಿತಾರಾಧ್ಯರ ನೇತೃತ್ವದಲ್ಲಿ ನಡೆಯಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.