ADVERTISEMENT

ಹಲೋ ಬದಲು ಜೈ ಕಿಸಾನ್ ಎನ್ನಿ: ಕೃಷಿ ಸಚಿವ ಬಿ.ಸಿ.ಪಾಟೀಲ್

ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ l ಜಿಕೆವಿಕೆಯಲ್ಲಿ ಆನ್‌ಲೈನ್‌ ಉಪನ್ಯಾಸಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 20:28 IST
Last Updated 13 ಜೂನ್ 2020, 20:28 IST
ನಗರದಲ್ಲಿ ಶನಿವಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡ ಕೃಷಿ ಮಹಾವಿದ್ಯಾಲಯದ ತರಗತಿ ಕೊಠಡಿಯಲ್ಲಿ ಆನ್ ಲೈನ್ ತರಗತಿ ನಡೆಯುತ್ತಿರುವ ದೃಶ್ಯ. ಕೃಷಿ ಸಚಿವ ಬಿ.ಸಿ ಪಾಟೀಲ್ ಮತ್ತು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ರಾಜೇಂದ್ರಪ್ರಸಾದ್ ಇದ್ದರು - –ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡ ಕೃಷಿ ಮಹಾವಿದ್ಯಾಲಯದ ತರಗತಿ ಕೊಠಡಿಯಲ್ಲಿ ಆನ್ ಲೈನ್ ತರಗತಿ ನಡೆಯುತ್ತಿರುವ ದೃಶ್ಯ. ಕೃಷಿ ಸಚಿವ ಬಿ.ಸಿ ಪಾಟೀಲ್ ಮತ್ತು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ರಾಜೇಂದ್ರಪ್ರಸಾದ್ ಇದ್ದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ ಅಥವಾ ಮೊಬೈಲ್ ಕರೆ ಸ್ವೀಕರಿಸಿದಾಗ ‘ಹಲೋ’ ಎನ್ನುವ ಬದಲು ‘ಜೈ ಕಿಸಾನ್’ ಎನ್ನಬೇಕು. ಇದು, ಜಗತ್ತಿಗೆ ಅನ್ನದಾತನ ಶಕ್ತಿಯನ್ನು ಸಾರುವ ಸಾಮಾಜಿಕ ಆಂದೋಲನವಾಗಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಶನಿವಾರ ಆನ್‍ಲೈನ್ ಉಪನ್ಯಾಸ ಕೊಠಡಿಗಳನ್ನು ಉದ್ಘಾಟಿಸಿದ ಬಳಿಕ ಬೋಧಕ ಹಾಗೂ ಬೋಧಕೇತರ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

‘ಕೊರೊನಾದಿಂದ ಬದುಕುಳಿದ ಏಕೈಕ ಕ್ಷೇತ್ರ ಕೃಷಿ. ಲಾಕ್‍ಡೌನ್ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಬಿಕ್ಕಟ್ಟಿಗೆ ಸಿಲುಕಬೇಕಿತ್ತು. ಇಂತಹ ಪರಿಸ್ಥಿತಿಗಳು ಎದುರಾದಾಗ ರೈತರು ಯಾವ ರೀತಿ ಸವಾಲುಗಳನ್ನು ಎದುರಿಸಬಹುದು ಎಂಬುದನ್ನು ಕುರಿತು ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾನಿಲಯ ಒಂದೇ ನಾಣ್ಯದ ಎರಡು ಮುಖಗಳು. ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಹತ್ತಿರವಾಗಿರಬೇಕು. ನೂತನ ತಳಿಗಳು ಹಾಗೂ ತಂತ್ರಜ್ಞಾನಗಳ ಅಳವಡಿಕೆಯಿಂದ ರೈತರಿಗೆ ಶ್ರಮ ಕಡಿಮೆಯಾಗಿ, ಹೆಚ್ಚಿನ ಇಳುವರಿ ಪಡೆಯಲು ಖಾಸಗಿ ಕಂಪನಿಗಳಂತೆ ಕೃಷಿ ವಿಜ್ಞಾನಿಗಳೂ ವ್ಯಾಪಕ ಪ್ರಚಾರ ನೀಡಬೇಕು. ಅವು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪುವ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅನ್ನವಿಲ್ಲದೆ ಬದುಕುವುದು ಅಸಾಧ್ಯ. ಯಾರೇ ಆದರೂ, ಜಗತ್ತಿಗೆ ಅನ್ನ ನೀಡುವ ರೈತನ ಮುಂದೆ ತಲೆಬಾಗಲೇಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.