ವಿಜಯಪುರ: ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಒಬ್ಬ ಆರೋಪಿ ಹಾಗೂ ಈ ಪ್ರಕರಣದಲ್ಲಿ ಆರೋಪಿಗಳಿಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಸಿದ ಬಿಹಾರದ ಮೂವರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್.ಹಿತೇಂದ್ರ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 9.01 ಕೆ.ಜಿ ಬಂಗಾರ ಹಾಗೂ ₹ 86,31,220 ನಗದನ್ನು ವಶ ಪಡಿಸಿಕೊಳ್ಳಲಾಗಿದೆ ಎಂದರು.
ಈ ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ದರೋಡೆ ಮಾಡಿದ್ದ ಇನ್ನುಳಿದ ಚಿನ್ನಾಭರಣ, ನಗದು ಹಣ ವಶಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಬಂಧಿತ ಮಹಾರಾಷ್ಟ್ರದ ಮುಖ್ಯ ಆರೋಪಿಯು (ತನಿಖೆ ದೃಷ್ಟಿಯಿಂದ ಹೆಸರು ಬಹಿರಂಗ ಪಡಿಸಲಿಲ್ಲ) ಬ್ಯಾಂಕ್ ದರೋಡೆಗೂ ಮುನ್ನಾ ಹಲವಾರು ಬಾರಿ ಬ್ಯಾಂಕಿಗೆ ಬಂದು ಒಳ-ಹೊರಗೆ ಪರಿಶೀಲನೆ ಮಾಡಿಕೊಂಡು ಹೋಗಿರುತ್ತಾನೆ. ಅಲ್ಲದೇ, ಬ್ಯಾಂಕ್ ದರೋಡೆ ಮಾಡಲು ಮಂಗಳವೇಡಾದಲ್ಲಿ ಒಂದು ಕಾರನ್ನು ಕಳವು ಮಾಡಿ, ಅದನ್ನು ಕೃತ್ಯಕ್ಕೆ ಬಳಸಿದ್ದನು ಎಂದರು.
ಆರೋಪಿಯನ್ನು ಅ.7ರಂದು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಈತನಿಂದ 55 ಗ್ರಾಂ ಬಂಗಾರದ ಬಳೆಗಳು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಆರೋಪಿಗಳಿಗೆ ಅಕ್ರಮ ಪಿಸ್ತೂಲ್‌ಗಳನ್ನು ಪೂರೈಸಿದ ಬಿಹಾರ ರಾಜ್ಯದ ಸಮಸ್ತಿಪುರದ ರಾಕೇಶಕುಮಾರ ಸಹಾನಿ(22), ರಾಜುಕುಮಾರ ಪಾಸ್ವಾನ(21) ಮತ್ತು ರಕ್ಷಕಕುಮಾರ ಮಾತೊ(21) ಎಂಬುವವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಕಳೆದ ಸೆಪ್ಟೆಂಬರ್ 16ರಂದು ಮೂರು ಜನ ಅಪರಿಚಿತ ವ್ಯಕ್ತಿಗಳು ಮಾಸ್ಕ್ ಧರಿಸಿಕೊಂಡು ಬಂದು ಖಾತೆ ತೆರೆಯುವ ನೆಪದಲ್ಲಿ ಬ್ಯಾಂಕಿನೊಳಗೆ ಪ್ರವೇಶಿಸಿ, ನಂತರ ಪಿಸ್ತೂಲ್ ಮತ್ತು ಚಾಕುಗಳನ್ನು ತೋರಿಸಿ ಬ್ಯಾಂಕ್ ಸಿಬ್ಬಂದಿಯನ್ನು ಕಟ್ಟಿಹಾಕಿ, ಬ್ಯಾಂಕಿನ ಸ್ಟ್ರಾಂಗ್ ರೂಮ್‌ನಲ್ಲಿದ್ದ ಸುಮಾರು ₹1.04 ಕೋಟಿ ನಗದು ಮತ್ತು 20 ಕೆ.ಜಿ. ಚಿನ್ನಾಭರಣವನ್ನು (ಅಂದಾಜು ಮೌಲ್ಯ ₹20 ಕೋಟಿ) ದೋಚಿ ಪರಾರಿಯಾಗಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಪ್ರಕರಣದ ತನಿಖೆಗೆ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.