ವಿಧಾನಸೌಧ
ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡಿ ಈಗಾಗಲೇ ಹೊರಡಿಸಿರುವ ಆದೇಶಕ್ಕೆ ಪೂರಕವಾಗಿ ಮೂಲ ಜಾತಿ, ಪ್ರವರ್ಗದಡಿ ಜಾತಿ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಒಳ ಮೀಸಲಾತಿ ಜಾರಿಯಾಗಿದ್ದರೂ ಜಾತಿ ಪ್ರಮಾಣಪತ್ರ ನೀಡಲು ತಂತ್ರಾಂಶ ಅಭಿವೃದ್ಧಿಪಡಿಸಿರಲಿಲ್ಲ. ಇದರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಹೊಸತಾಗಿ ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅಡ್ಡಿಯಾಗಿತ್ತು. ಇದನ್ನು ನಿವಾರಿಸುವತ್ತ ಸರ್ಕಾರ ಮುಂದಡಿ ಇಟ್ಟಿದೆ.
ಪರಿಶಿಷ್ಟ ಜಾತಿಗಳನ್ನು ‘ಪ್ರವರ್ಗ–ಎ’, ‘ಪ್ರವರ್ಗ –ಬಿ’, ‘ಪ್ರವರ್ಗ–ಸಿ’ ಎಂದು ಮೂರು ಪ್ರವರ್ಗಗಳಡಿ ವರ್ಗೀಕರಿಸಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಅದರ ಅನ್ವಯ ಜಾತಿ ಪ್ರಮಾಣಪತ್ರ ಪಡೆಯಲು ಅಗತ್ಯವಿರುವ ನಿಯಮಗಳನ್ನು ಸಮಾಜ ಕಲ್ಯಾಣ ಇಲಾಖೆ ರೂಪಿಸಿದೆ. ಅಲ್ಲದೆ, ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮೂಲ ಜಾತಿ ತಿಳಿಸದವರಿಗೂ ಜಾತಿ ಪ್ರಮಾಣಪತ್ರ ಪಡೆಯಲು ಇರುವ ಅಡ್ಡಿ, ಆತಂಕಗಳನ್ನು ನಿವಾರಿಸಲಾಗಿದೆ.
ಸುತ್ತೋಲೆಯಲ್ಲಿರುವ ಅಂಶಗಳಂತೆ ಪರಿಶಿಷ್ಟ ಜಾತಿಯವರಿಗೆ ಜಾತಿ ಪ್ರಮಾಣಪತ್ರ ನೀಡಲು ಕ್ರಮ ವಹಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ.
ಸುತ್ತೋಲೆಯಲ್ಲಿ ಏನಿದೆ?: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಂವಿಧಾನದ ವಿಧಿ 15 ಮತ್ತು 16ರ ಅನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ಕಲ್ಪಿಸಲು ‘ಪ್ರವರ್ಗ- ಎ’ ಪಟ್ಟಿಯಲ್ಲಿ 16 ಜಾತಿಗಳು, ‘ಪ್ರವರ್ಗ-ಬಿ’ ಪಟ್ಟಿಯಲ್ಲಿ 19 ಜಾತಿಗಳು ಹಾಗೂ ‘ಪ್ರವರ್ಗ-ಸಿ’ ಪಟ್ಟಿಯಲ್ಲಿ 63 ಜಾತಿಗಳನ್ನು ಸೇರಿಸಿ ವರ್ಗೀಕರಿಸಲಾಗಿದೆ. ಮೂಲ ಜಾತಿ ತಿಳಿಸದೆ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ನಮೂದಿಸಿದ ಮೂರು ಸಮುದಾಯಗಳವರು ‘ಪ್ರವರ್ಗ- ಎ’ ಅಥವಾ ಪ್ರವರ್ಗ ‘ಬಿ’ ಅಡಿ ಮೀಸಲಾತಿ ಸೌಲಭ್ಯ ಪಡೆಯಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯ ಹೊರತುಪಡಿಸಿ ಉಳಿದ 98 ಜಾತಿಗಳ ಜನರು ಈಗಾಗಲೇ ಜಾತಿಯನ್ನು ನಮೂದಿಸಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಅದೇ ಜಾತಿ ಪ್ರಮಾಣಪತ್ರವನ್ನು ಸಂಬಂಧಪಟ್ಟ ಪ್ರವರ್ಗದೊಂದಿಗೆ ಮೀಸಲಾತಿ ಪಡೆಯಲು ಬಳಸಬಹುದು. ಜಾತಿ ಪ್ರಮಾಣಪತ್ರಗಳನ್ನು ಆಯಾ ಜಾತಿಗಳಿಗೆ ಸಂಬಂಧಿಸಿದ ಪ್ರವರ್ಗದಡಿಯಲ್ಲೇ ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಿಕೊಂಡು ಜಾತಿ ಪ್ರಮಾಣಪತ್ರ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಅಭ್ಯರ್ಥಿಯು ಕೊರಚ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದರೆ, ಈ ಸಮುದಾಯವನ್ನು ‘ಪ್ರವರ್ಗ-ಸಿ’ಯಲ್ಲಿ ವರ್ಗೀಕರಿಸಿರುವುದರಿಂದ ನಾಡ ಕಚೇರಿ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರದವರು ಜಾತಿ ಪ್ರಮಾಣಪತ್ರವನ್ನು ‘ಕೊರಚ (ಪ್ರವರ್ಗ-ಸಿ)’ ಎಂದು ನೀಡಬೇಕು. ಅಭ್ಯರ್ಥಿಯು ಪರೆಯನ್, ಪರೆಯ ಎಂದು ಈಗಾಗಲೇ ಜಾತಿ ಪ್ರಮಾಣಪತ್ರ ಪಡೆದಿದ್ದರೆ, ಈ ಸಮುದಾಯವನ್ನು ‘ಪ್ರವರ್ಗ-ಬಿ’ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣಪತ್ರವನ್ನು ‘ಪರೆಯನ್, ಪರೆಯ (ಪ್ರವರ್ಗ-ಬಿ)’ ಎಂದು ನೀಡಲು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಈಗಾಗಲೇ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದವರು ತಮ್ಮ ಮೂಲ ಜಾತಿಯನ್ನು ನಮೂದಿಸಿ ಪ್ರವರ್ಗ ‘ಎ’ ಅಥವಾ ಪ್ರವರ್ಗ ‘ಬಿ’ ಅಡಿ ಮೀಸಲಾತಿ ಸೌಲಭ್ಯ ಪಡೆಯಬಹುದು. ಉದಾಹರಣೆಗೆ, ಒಬ್ಬ ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದು, ಮೂಲ ಜಾತಿಯು ‘ಹೊಲೆಯ’ ಎಂದು ಇದ್ದರೆ, ಹೊಸತಾಗಿ ಪಡೆಯುವ ಜಾತಿ ಪ್ರಮಾಣಪತ್ರದಲ್ಲಿ ‘ಆದಿ ಕರ್ನಾಟಕ (ಹೊಲೆಯ/ಪ್ರವರ್ಗ ಬಿ)’ , ಮೂಲಜಾತಿಯು ‘ಮಾದಿಗ’ ಎಂದು ಇದ್ದರೆ ‘ಆದಿ ಕರ್ನಾಟಕ (ಮಾದಿಗ/ಪ್ರವರ್ಗ ಬಿ)’ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕು. ಆದಿ ದ್ರಾವಿಡ ಮತ್ತು ಆದಿ ಆಂಧ್ರ ಅಭ್ಯರ್ಥಿಗಳು ಇದೇ ರೀತಿ ಜಾತಿ ಪ್ರಮಾಣಪತ್ರ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.