ADVERTISEMENT

ರಾಜೀನಾಮೆ: ‘ಸುಪ್ರೀಂ’ ವಿಚಾರಣೆ ಇಂದು

ರಾಜೀನಾಮೆ: ‘ಸುಪ್ರೀಂ’ ವಿಚಾರಣೆ ಇಂದು ನಿಗದಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:10 IST
Last Updated 11 ಜುಲೈ 2019, 20:10 IST
ಪೊಲೀಸ್‌ ಸರ್ಪಗಾವಲಿನಲ್ಲಿ ವಿಧಾನಸೌಧ
ಪೊಲೀಸ್‌ ಸರ್ಪಗಾವಲಿನಲ್ಲಿ ವಿಧಾನಸೌಧ   

ನವದೆಹಲಿ: ‘ಅತೃಪ್ತ ಶಾಸಕರ ವಿಚಾರಣೆ ನಡೆಸಿ ನಿರ್ಧಾರ ಪ್ರಕಟಿಸುವಂತೆ ರಾಜ್ಯ ವಿಧಾನಸಭೆಯ ಸ್ಪೀಕರ್‌ಗೆ ಗಡುವು ವಿಧಿಸಿರುವ ಆದೇಶ ಹಿಂಪಡೆಯುವಂತೆ ಕೋರಿ ಸ್ಪೀಕರ್ ವತಿಯಿಂದ ಸಲ್ಲಿಸಲಾದ ಮೇಲ್ಮನವಿಯ ತ್ವರಿತ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಶುಕ್ರವಾರ ವಿಚಾರಣೆ ನಡೆಸಲು ನಿರ್ಧರಿಸಿದೆ.

ಸಂಜೆ 6ರೊಳಗೆ ಸ್ಪೀಕರ್‌ ಭೇಟಿ ಮಾಡುವಂತೆ ಅತೃಪ್ತರಿಗೆ ಅವಕಾಶ ನೀಡಿ ಗುರುವಾರ ಬೆಳಿಗ್ಗೆ ಆದೇಶ ಹೊರಡಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ, ಅದೇ ದಿನ ಅವರ ವಿಚಾರಣೆ ನಡೆಸಿ ಶುಕ್ರವಾರದ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಿತ್ತು.

‘ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆಯೇ’ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪೀಕರ್‌ ಅವರ ಸಂವಿಧಾನಾತ್ಮಕ ಕರ್ತವ್ಯ ಹಾಗೂ ವಿಧಾನಸಭೆಯ ನಿಯಮಗಳು ಖುದ್ದು ವಿಚಾರಣೆಯನ್ನು ಕಡ್ಡಾಯಗೊಳಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸುವುದು ಅಸಾಧ್ಯ. ಹಾಗಾಗಿ ಗಡುವು ವಿಧಿಸಿರುವ ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಆದೇಶ ಹೊರಬಿದ್ದ ಎರಡು ಗಂಟೆಯ ಬಳಿಕ ಸ್ಪೀಕರ್‌ ರಮೇಶಕುಮಾರ್‌ ಪರ ಅರ್ಜಿ ಸಲ್ಲಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಕೋರಿದರು.

ADVERTISEMENT

ಕೆಲವು ಶಾಸಕರ ಸದಸ್ಯತ್ವ ಅನರ್ಹತೆ ಕೋರಿ ಸಂವಿಧಾನದ 10ನೇ ಪರಿಚ್ಛೇದ (ಪಕ್ಷಾಂತರ)ದ ಅಡಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಲು ಸ್ಪೀಕರ್‌ಗೆ ಈ ಆದೇಶದಿಂದ ಅಡ್ಡಿ ಉಂಟಾಗಲಿದೆ ಎಂದು ಸಿಂಘ್ವಿ ತಿಳಿಸಿದರೂ, ಪುರಸ್ಕರಿಸದ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೇ ನಿಗದಿಪಡಿಸಿತು.

‘ಈಗಾಗಲೇ ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಆದೇಶ ನೀಡಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಸ್ಪೀಕರ್‌ ಅವರೇ ನಿರ್ಧರಿಸಲಿ’ ಎಂದು ಪೀಠ ಹೇಳಿತು.

ಸ್ಪೀಕರ್‌ ಭೇಟಿಗೆ ಸೂಚನೆ:‘ಸ್ಪೀಕರ್‌ ಅವರು ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ’ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟ್ಗಿ ಬೆಳಿಗ್ಗೆ ನಡೆದ ವಿಚಾರಣೆಯ ವೇಳೆ ನ್ಯಾಯಪೀಠದೆದುರು ಆರೋಪಿಸಿದರಲ್ಲದೆ, ಸೂಕ್ತ ವಿಚಾರಣೆಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

‘ಶಾಸಕರು ರಾಜೀನಾಮೆ ಸಲ್ಲಿಸಿದರೂ ಅದನ್ನು ಸ್ವೀಕರಿಸಲಾಗಿಲ್ಲ ಎಂಬುದು ಅಚ್ಚರಿ ಉಂಟು ಮಾಡಿದೆ’ ಎಂದು ರೋಹಟ್ಗಿ ಹೇಳುತ್ತಿದ್ದಂತೆಯೇ, ‘ರಾಜೀನಾಮೆ ಸಲ್ಲಿಸಿದರೂ ಅದನ್ನು ಸ್ಪೀಕರ್ ಸ್ವೀಕರಿಸಿಲ್ಲ ಎಂದರೆ ಶಾಸಕರು ಅದೃಷ್ಟವಂತರಲ್ಲವೇ’ ಎಂದು ಹಾಸ್ಯಭರಿತ ದನಿಯಲ್ಲೇ ನ್ಯಾಯಮೂರ್ತಿ ಗೊಗೊಯಿ ಪ್ರಶ್ನಿಸಿದರು.

‘ಶಾಸಕರು ಮೊದಲು ರಾಜೀನಾಮೆ ಸಲ್ಲಿಸಿ ನಂತರ ಅದನ್ನು ಹಿಂದೆ ಪಡೆದಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ, ಇದು ಪಕ್ಷಾಂತರಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲ. ಬದಲಿಗೆ, ಸ್ವಯಂ ಪ್ರೇರಿತ ರಾಜೀನಾಮೆ. ಹೀಗಾಗಿ ಸಂಜೆ 6ರೊಳಗೆ ಸ್ಪೀಕರ್ ಭೇಟಿಗೆ ಅನುವು ಮಾಡಿಕೊಡಬೇಕು ಎಂದು ರೋಹಟ್ಗಿ ಮನವಿ ಮಾಡಿದರು.

ಇದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಪೀಠವು, ವಿಚಾರಣೆಗೆ ಹಾಜರಾಗುವ ಶಾಸಕರಿಗೆ ಡಿಜಿಪಿ ನೇತೃತ್ವದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸೂಚಿಸಿತು.ಈ ಸಂದರ್ಭ ಸ್ಪೀಕರ್‌ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

ಸ್ಪೀಕರ್‌ ಅರ್ಜಿಯಲ್ಲಿನ ಅಂಶಗಳು:
* ಸಂವಿಧಾನದ 190ನೇ ವಿಧಿ ಅಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಸ್ಪೀಕರ್‌ಗೆ ನಿರ್ದೇಶನ ನೀಡುವಂತಿಲ್ಲ.
* ಅತೃಪ್ತರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ ಸ್ಪೀಕರ್‌ಗೆ ಪ್ರತಿವಾದಿಯಾಗಲು ಅವಕಾಶ ನೀಡದೆ ಆದೇಶಿಸಲಾಗಿದೆ.
* ರಾಜೀನಾಮೆ ಸ್ವಯಂ ಪ್ರೇರಿತವೇ ಎಂಬುದನ್ನು ಪರಿಶೀಲಿಸಲು ಅಧಿಕ ಸಮಯ ಬೇಕು. ರಾಜೀನಾಮೆ ಸಲ್ಲಿಸುವವರು ನೀಡುವ ಕಾರಣ ತೃಪ್ತಿ ತರಬೇಕು.
* ಶಾಸಕರ ಸದಸ್ಯತ್ವ ಅನರ್ಹತೆ ಕೋರಿ 2019ರ ಫೆಬ್ರವರಿ 11ರಂದು ಸಲ್ಲಿಕೆಯಾಗಿರುವ ದೂರಿನ ವಿಚಾರಣೆ ಬಾಕಿ ಇದೆ. ಈ ಅಂಶ ಅತೃಪ್ತರ ಮೇಲ್ಮನವಿಯಲ್ಲಿ ಪ್ರಸ್ತಾಪವಾಗಿಲ್ಲ.
* ಅತೃಪ್ತ ಶಾಸಕರ ದೂರಿನಲ್ಲಿ ಸ್ಪೀಕರ್ ವಿಶ್ವಾಸಾರ್ಹತೆ ಪ್ರಶ್ನಿಸಲಾಗಿದೆ. ಇದಕ್ಕೆ ಅಫಿಡವಿಟ್ ಮೂಲಕ ಉತ್ತರವನ್ನು ನೀಡಲಾಗುವುದು.
* ರಾಜೀನಾಮೆ ನಂತರ ಪಕ್ಷ ಬದಲಿಸಿ ಶಾಸಕರಾಗುವವರು ಎಲ್ಲ ಸೌಲಭ್ಯ ಪಡೆಯುತ್ತಾರೆ. ಅನರ್ಹಗೊಳಿಸದೆ ಬಿಟ್ಟಲ್ಲಿ ತಕ್ಷಣಕ್ಕೆ ಚುನಾವಣೆ ಎದುರಿಸಲು ಅವಕಾಶ ನೀಡಿದಂತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.