ADVERTISEMENT

ಒಳ ಮೀಸಲು: ಎಡಗೈಗೂ 6, ಬಲಗೈಗೂ 6– ಸಚಿವ ಸಂಪುಟ ಸಭೆಯಲ್ಲಿ ಹೊಸ ಸೂತ್ರ

ಒಳ ಮೀಸಲು: ಸಚಿವ ಸಂಪುಟ ಸಭೆಯಲ್ಲಿ ಹೊಸ ಸೂತ್ರಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 20:28 IST
Last Updated 19 ಆಗಸ್ಟ್ 2025, 20:28 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‍ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಬಹುವರ್ಷಗಳ ಆಗ್ರಹಗಳಿಗೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ತುಸು ಪರಿಷ್ಕರಿಸಿ ಜಾರಿ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಮಂಗಳವಾರ ತಡರಾತ್ರಿಯವರೆಗೆ ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಬುಧವಾರ ಈ ಬಗ್ಗೆ ಸದನದಲ್ಲಿ ಹೇಳಿಕೆ ನೀಡಲು ಮತ್ತು ಎರಡು ದಿನಗಳಲ್ಲಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ.

ADVERTISEMENT

101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಅಂದರೆ ಎಡಗೈ, ಬಲಗೈ  ಮತ್ತು ಸ್ಪಶ್ಯ ಎಂದು ವರ್ಗೀಕರಿಸಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಶೇ 17ರಷ್ಟಿರುವ ಮೀಸಲಾತಿಯನ್ನು ಎಡಗೈ ಮತ್ತು ಬಲಗೈ ಸಂಬಂಧಿತ ಜಾತಿಗಳ ಗುಂಪಿಗೆ ತಲಾ ಶೇ 6, ಕೊರಚ, ಕೊರಮ, ಭೋವಿ, ಲಂಬಾಣಿ ಜಾತಿಗಳನ್ನು ಒಳಗೊಂಡ ಸ್ಪೃಶ್ಯ’ ಗುಂಪುಗಳಿಗೆ ಶೇ 5 ಮೀಸಲಾತಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ. 

ಪರಿಶಿಷ್ಟ ಜಾತಿಯಲ್ಲಿ 101 ಮೂಲ ಜಾತಿಗಳನ್ನು ಆಯೋಗವು ಐದು ಗುಂಪುಗಳಾಗಿ ವರ್ಗೀಕರಿಸಿ, ಲಭ್ಯವಿರುವ ಶೇ 17 ಮೀಸಲಾತಿಯನ್ನು ಪ್ರವರ್ಗ ‘ಎ’ಗೆ ಶೇ 1 (ಒಟ್ಟು ಜಾತಿಗಳು 59 ಜಾತಿಗಳು), ಪ್ರವರ್ಗ ‘ಬಿ’ಗೆ ಶೇ 6 (18 ಜಾತಿಗಳು), ಪ್ರವರ್ಗ ‘ಸಿ’ಗೆ ಶೇ 5 (17 ಜಾತಿಗಳು), ಪ್ರವರ್ಗ ‘ಡಿ’ಗೆ ಶೇ 4 (4 ಜಾತಿಗಳು), ಪ್ರವರ್ಗ ‘ಇ’ಗೆ ಶೇ 1ರಂತೆ (3 ಜಾತಿಗಳು) ಹಂಚಿಕೆ ಮಾಡಿತ್ತು.

ಆಯೋಗದ ವರದಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಸಚಿವ ಸಂಪುಟ ಸಭೆಯಲ್ಲಿ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಲು ರಾಜ್ಯದಾದ್ಯಂತ ನಡೆದ ಸಮೀಕ್ಷೆಯ ದತ್ತಾಂಶಗಳ ಕುರಿತಂತೆ ಆಯೋಗದ ವರದಿಯಲ್ಲಿರುವ ಅಂಶಗಳ ಪ್ರಾತ್ಯಕ್ಷಿಕೆ ನೀಡಿದ ಮಣಿವಣ್ಣನ್‌, ಎಲ್ಲರನ್ನು ಸಮನಾಗಿ ಕಾಣುವ ಸಾಮಾಜಿಕ ನ್ಯಾಯದ ವರದಿ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು’ ಎಂದು ಗೊತ್ತಾಗಿದೆ.

‘ನಮಗೂ ಸಮಾನ ಮೀಸಲಾತಿ ಇರಲಿ’ ಎಂದು ಬಲಗೈ ಸಮುದಾಯದ ಜಿ. ಪರಮೇಶ್ವರ ಮತ್ತು ಎಚ್‌.ಸಿ. ಮಹದೇವಪ್ಪ ಅವರು ಸಭೆಯಲ್ಲಿ ಕೋರಿಕೆ ಮುಂದಿಟ್ಟರೆ, ‘ನಾವೂ ದಲಿತರೆ. ಉಪ ಜಾತಿಗಳಿಗೆ ಮೀಸಲಾತಿ ಹಂಚಿಕೆ ವೇಳೆ ಭೋವಿ ಸಮುದಾಯಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಬೋವಿ ಸಮುದಾಯದ ಶಿವರಾಜ್ ತಂಗಡಗಿ ಹೇಳಿದರು ಎಂದು ಗೊತ್ತಾಗಿದೆ.

‘ನಮ್ಮದು ಜಾತಿ ಪ್ರಮಾಣಪತ್ರ ಕೇಳುತ್ತಾರೆ. ಆದರೆ. ಮೂಲ ಜಾತಿ ಗೊತ್ತಿಲ್ಲದ ಕಾರಣಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದಾರೆ. ಈ ಗೊಂದಲ ಮೊದಲು ಬಗೆಹರಿಯಲಿ’ ಎಂದು ಪರಮೇಶ್ವರ ಸಲಹೆ ನೀಡಿದರು ಎಂದು ಗೊತ್ತಾಗಿದೆ.

‘ನಾಗಮೋಹನದಾಸ್‌ ಆಯೋಗ ಮಾಡಿರುವ ಜಾತಿಗಳ ವರ್ಗೀಕರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸುವ ಅಗತ್ಯವಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟ ಸಭೆಗೆ ಟಿಪ್ಪಣಿ ನೀಡಿತ್ತು. 

101 ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಲಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿರುವ ಜೊತೆಗೆ ಇತರ ಐದು ಶಿಫಾರಸುಗಳನ್ನೂ ಮಾಡಿತ್ತು. 2024ರ ಅಕ್ಟೋಬರ್ 28ರಿಂದ ( ಒಳ ಮೀಸಲಾತಿ ಕಾರಣಕ್ಕೆ ನೇಮಕಾತಿ ಸ್ಥಗಿತಗೊಂಡಿರುವ ದಿನ) ನೇಮಕಾತಿ ಆರಂಭವಾಗುವರೆಗೆ ವಯೋಮತಿ ಮೀರಿದವರಿಗೆ ವಯೋಮಿತಿ ಸಡಿಲಿಸಿ ಅವಕಾಶ ನೀಡಬೇಕು. ಒಂದು ಪ್ರವರ್ಗದಲ್ಲಿ ಭರ್ತಿಯಾಗದೆ ಉಳಿದ ಹುದ್ದೆಗಳನ್ನು ಕ್ಯಾರಿ ಪಾರ್ವಡ್‌ ನಿಯಮದಂತೆ ಭರ್ತಿ ಮಾಡಬೇಕು. ನಂತರವೂ ಸೂಕ್ತ ಅಭ್ಯರ್ಥಿ ಲಭ್ಯ ಇಲ್ಲದೇ ಇದ್ದರೆ, ಪರಿಶಿಷ್ಟ ಜಾತಿಯ ಮತ್ತೊಂದು ಪ್ರವರ್ಗಕ್ಕೆ ವರ್ಗಾವಣೆ ಮಾಡಬೇಕು. ಕೆಲವು ಜಾತಿಗಳ ಹೆಸರು ಅಪಹಾಸ್ಯಕ್ಕೆ, ನಗೆಪಾಟಲಿಗೆ ಈಡಾಗುತ್ತಿದೆ ಎಂಬ ಕಾರಣಕ್ಕೆ ಬದಲಿಸಿಕೊಳ್ಳಲು ಅಪೇಕ್ಷಿಸಿದರೆ ಅವಕಾಶ ಮಾಡಿಕೊಡಬೇಕು, ಮೂಲ ಜಾತಿ ಗೊತ್ತಿದ್ದರೂ ಜಾತಿ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿ ಪ್ರಮಾಣಪತ್ರ ಪಡೆದುಕೊಂಡವರಿಗೆ, ಅವರ ಜಾತಿಯ ಬಗ್ಗೆ ಅಧ್ಯಯನ ನಡೆಸಿ ಜಾತಿ ಪಟ್ಟಿಯಲ್ಲಿ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು, ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಹೆಸರಿನ ಜೊತೆಗೆ ತಮ್ಮ ಮೂಲಜಾತಿಯ ಹೆಸರು ತಿಳಿಸಿದ್ದಾರೆ. ಅವರಿಗೆ ಮೂಲಜಾತಿಯ ಪ್ರಮಾಣಪತ್ರ ಕ್ರಮ ಕೈಗೊಳ್ಳಬೇಕು ಎಂದೂ ಸರ್ಕಾರಕ್ಕೆ ತನ್ನ ವರದಿಯಲ್ಲಿ ಆಯೋಗ ಶಿಫಾರಸು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.