ADVERTISEMENT

ಪರಿಶಿಷ್ಟರ ‘ನಿಧಿ’ ಶೇ 41ರಷ್ಟು ಬಿಡುಗಡೆಗೆ ಇನ್ನೂ ಬಾಕಿ

ನೋಡಲ್‌ ಏಜೆನ್ಸಿಗಳ ಸಭೆಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆ ಬಹಿರಂಗ

ರಾಜೇಶ್ ರೈ ಚಟ್ಲ
Published 26 ಜನವರಿ 2025, 22:30 IST
Last Updated 26 ಜನವರಿ 2025, 22:30 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಬೆಂಗಳೂರು: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ (2024–25) ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಕಾರ್ಯಕ್ರಮಗಳ ಅಡಿ ಹಂಚಿಕೆ ಮಾಡಿರುವ ₹39,914.87 ಕೋಟಿ ಅನುದಾನದಲ್ಲಿ ಜ. 17ರವರೆಗೆ ₹23,485.70 ಕೋಟಿ (ಶೇ 58.84) ಬಿಡುಗಡೆ ಆಗಿದೆ. ಆರ್ಥಿಕ ವರ್ಷ ಅಂತ್ಯವಾಗಲು ಇನ್ನು ಎರಡು ತಿಂಗಳಷ್ಟೆ ಉಳಿದ್ದು, ಇನ್ನೂ ₹16,429.17 ಕೋಟಿ (ಶೇ 41.16) ಬಿಡುಗಡೆಗೆ ಬಾಕಿ ಇದೆ.

ಈವರೆಗೆ ಬಿಡುಗಡೆ ಆಗಿರುವ ಅನುದಾನದಲ್ಲಿ ₹20,404.38 ವೆಚ್ಚವಾಗಿದೆ. ಪರಿಶಿಷ್ಟರ ಕಲ್ಯಾಣ ಉದ್ದೇಶದಿಂದ ಬಜೆಟ್‌ನಲ್ಲಿ ಹಂಚಿಕೆ ಮಾಡಿರುವ ಒಟ್ಟು ಅನುದಾನಕ್ಕೆ ಹೋಲಿಸಿದರೆ, ಎಲ್ಲ ಇಲಾಖೆಗಳು ಈವರೆಗೆ ವೆಚ್ಚ ಮಾಡಿರುವ ಮೊತ್ತ ಶೇ 51ರಷ್ಟು ಮಾತ್ರ. ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಇತ್ತೀಚೆಗೆ ನಡೆಸಿದ ನೋಡಲ್‌ ಏಜೆನ್ಸಿಗಳ ಸಭೆಯಲ್ಲಿ ಈವರೆಗಿನ ಪ್ರಗತಿಯ ಕುರಿತು ಚರ್ಚೆ ನಡೆಸಲಾಗಿದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಒಟ್ಟು 34 ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ಅನುದಾನ ಬಳಕೆ ಮಾಡಿರುವ ಇಲಾಖೆಗಳ ಪೈಕಿ, ಸಮಾಜ ಕಲ್ಯಾಣ ಇಲಾಖೆ ಶೇ 45, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೇವಲ ಶೇ 22ರಷ್ಟು ಮಾತ್ರ ಪ್ರಗತಿ ತೋರಿಸಿವೆ.

ADVERTISEMENT

ಕಂದಾಯ, ಇಂಧನ, ಸಾರಿಗೆ ಸೇರಿದಂತೆ ಒಟ್ಟು 14 ಇಲಾಖೆಗಳು ಶೇ 50ಕ್ಕಿಂತ ಹೆಚ್ಚು ಪ್ರಗತಿ ತೋರಿಸಿದರೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸೇರಿದಂತೆ 11 ಇಲಾಖೆಗಳು ಶೇ 35ರಿಂದ ಶೇ 50ರ ನಡುವೆ ವೆಚ್ಚ ಮಾಡಿವೆ. ಲೋಕೋಪಯೋಗಿ, ಐಟಿಬಿಟಿ, ರೇಷ್ಮೆ, ಕೌಶಲ ಅಭಿವೃದ್ಧಿ ಸೇರಿ ಒಂಬತ್ತು ಇಲಾಖೆಗಳು ಹಂಚಿಕೆಯಾದ ಮೊತ್ತದಲ್ಲಿ ಶೇ 35ಕ್ಕಿಂತಲೂ ಕಡಿಮೆ ವೆಚ್ಚ ಮಾಡಿವೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ‘ಗೃಹ ಲಕ್ಷ್ಮಿ’ ಯೋಜನೆಗೆ ಒಟ್ಟು 30,60,321 (ಎಸ್‌ಸಿ– 21,96,321, ಎಸ್‌ಟಿ 8.64 ಲಕ್ಷ) ಫಲಾನುಭವಿಗಳನ್ನು ಪರಿಗಣಿಸಿ, ಈ ಯೋಜನೆಗಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಗೆ ₹7,881.91 ಕೋಟಿ ಅನುದಾನ ಒದಗಿಸಲಾಗಿದೆ.  ಆದರೆ, ಈ ವರ್ಷ ₹7,344.77 ಕೋಟಿ ಮಾತ್ರ ಅಗತ್ಯವಿದ್ದು, ₹537.14 ಕೋಟಿ ಉಳಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ.

‘ಗೃಹ ಜ್ಯೋತಿ’ ಯೋಜನೆ ಜಾರಿಗಾಗಿ ಇಂಧನ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ₹2,585.93 ಕೋಟಿ ಹಂಚಿಕೆ ಮಾಡಲಾಗಿದೆ, ಅದರಲ್ಲಿ ₹2016.16 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ₹1,948.16 ಕೋಟಿ ವೆಚ್ಚವೂ ಆಗಿದೆ ಎಂಬ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಯು ಸಭೆಗೆ ನೀಡಿದೆ. 

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಾರಿಗೆ ಸೌಲಭ್ಯದ ‘ಶಕ್ತಿ’ ಯೋಜನೆಯಡಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳ ನಿಖರ ಅಂಕಿಅಂಶ ನೀಡಲು ಸಾಧ್ಯ ಇಲ್ಲವೆಂದು ಸಾರಿಗೆ ಇಲಾಖೆ ಈಗಾಗಲೇ ತಿಳಿಸಿದೆ. ಪ್ರಸಕ್ತ ಸಾಲಿನಲ್ಲಿ ‘ಶಕ್ತಿ’ಗಾಗಿ ಹಂಚಿಕೆ ಮಾಡಿರುವ ₹1,451.45 ಕೋಟಿಯಲ್ಲಿ ₹1,209.54 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಈವರೆಗೆ ₹1,102.97 ಕೋಟಿ ವೆಚ್ಚವಾಗಿದೆ. ಎಸ್‌ಸಿ, ಎಸ್‌ಟಿ ಫಲಾನುಭವಿಗಳ ನಿಖರ ಅಂಕಿ–ಅಂಶ ಸಿಗದೇ ಇರುವುದರಿಂದ ಮುಂಬರುವ ಸಾಲಿನಲ್ಲಿ (2025–26) ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಹಂಚಿಕೆಯನ್ನು ಶೇ 24.10 ಮಿತಿಗೆ ಸೀಮಿತಗೊಳಿಸಲು ಪ್ರಸ್ತಾಪಿಸಲಾಗಿದೆ. 

ಅನ್ನಭಾಗ್ಯ ಯೋಜನೆ ಅನುಷ್ಠಾನಕ್ಕೆ ಆಹಾರ ಇಲಾಖೆಗೆ ಬಜೆಟ್‌ನಲ್ಲಿ ₹2,635.74 ಕೋಟಿ ಹಂಚಿಕೆ ಮಾಡಲಾಗಿತ್ತು. ಬಳಿಕ ಅದನ್ನು ₹448.15 ಕೋಟಿ ಕಡಿತಗೊಳಿಸಿ, ಪರಿಷ್ಕೃತ ಆಯವ್ಯಯದಲ್ಲಿ ನೇರ ನಗದು ವರ್ಗಾವಣೆಗೆ (ಡಿಬಿಟಿ) ₹2,187.59 ಕೋಟಿ ಒದಗಿಸಲಾಗಿದೆ. ಈ ಮೊತ್ತದಲ್ಲಿ ₹1,276.09 ಬಿಡುಗಡೆ ಮಾಡಲಾಗಿದೆ. ಈವರೆಗೆ  800.62 ಕೋಟಿಯನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮಾಡಲಾಗಿದೆ.

‘ಯುವನಿಧಿ’ ಗ್ಯಾರಂಟಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 53,625 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಕೌಶಲಾಭಿವೃದ್ಧಿ ಇಲಾಖೆ ತಿಳಿಸಿತ್ತು. ಆದರೆ, ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿತ ಫಲಾನುಭವಿಗಳ ಸಂಖ್ಯೆ 38,483 (ಡಿಪ್ಲೊಮಾ 411, ಪದವೀಧರರು–38,072) ಮಾತ್ರ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ₹175.50 ಕೋಟಿ ಅನುದಾನ ಒದಗಿಸಲಾಗಿದ್ದು, ಫಲಾನುಭವಿಗಳ ಸಂಖ್ಯೆಯನ್ನು ಪರಿಗಣಿಸಿದಾಗ ₹137.80 ಕೋಟಿ ಅನುದಾನ ಮಾತ್ರ ಅಗತ್ಯವಿದೆ. ₹37.70 ಕೋಟಿ ಉಳಿಕೆ ಆಗಲಿದೆ ಎಂದೂ ಸಭೆಗೆ ಮಾಹಿತಿ ನೀಡಲಾಗಿದೆ.

ನೋಡಲ್‌ ಏಜೆನ್ಸಿಗಳ ಸಭೆಯಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ್ದೇನೆ.  ಅನುದಾನ ಪೂರ್ತಿ ಬಿಡುಗಡೆ ಆಗಲಿದ್ದು ಯಾವುದೇ ಕಾರಣಕ್ಕೂ ಲ್ಯಾಪ್ಸ್‌ ಆಗುವುದಿಲ್ಲ 
ಡಾ.ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
ಮುಂದಿನ ಬಜೆಟ್‌ನಲ್ಲಿ ₹45790 ಕೋಟಿ ಹಂಚಿಕೆಗೆ ಪ್ರಸ್ತಾವ
‘ಎಸ್‌ಸಿಎಸ್‌ಪಿ ಟಿಎಸ್‌ಪಿ ಕಾಯ್ದೆ 2013’ರ ಅಡಿ ಒದಗಿಸುವ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೇರವಾಗಿ ಪ್ರಯೋಜನ ಆಗುವ ಕಾರ್ಯಕ್ರಮಗಳಿಗೆ ಮಾತ್ರ ಹಂಚಿಕೆ ಮಾಡಬೇಕಿದೆ. ಅದರಂತೆ ಫಲಾನುಭವಿಗಳ ನಿಖರ ಸಂಖ್ಯೆಗೆ ಅನುಗುಣವಾಗಿ ಎಲ್ಲ ಇಲಾಖೆಗಳು ಎಲ್ಲ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲು ಕರಡು ಎಸ್‌ಸಿಎಸ್‌ಪಿ ಟಿಎಸ್‌ಪಿ ಆಯವ್ಯಯ ಸಿದ್ಧಪಡಿಸಬೇಕಿದೆ. 2024–25ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹1.60 ಲಕ್ಷ ಕೋಟಿಯನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿತ್ತು. ಆ ಮೊತ್ತದಲ್ಲಿ ಶೇ 24.10ರಷ್ಟು ಅನುದಾನವನ್ನು ಪರಿಶಿಷ್ಟರ ಕಲ್ಯಾಣ ಯೋಜನೆಗಳಿಗೆ ಒದಗಿಸಲಾಗಿದೆ. 2025–26ನೇ ಸಾಲಿನ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹1.90 ಲಕ್ಷ ಕೋಟಿ ಅನುದಾನ ಅಂದಾಜಿಸಲಾಗಿದ್ದು ಅದರಲ್ಲಿ ಶೇ 24.10ರಂತೆ ಎಸ್‌ಸಿಎಸ್‌ಪಿ ₹32585 ಕೋಟಿ ಮತ್ತು ಟಿಎಸ್‌ಪಿ ₹13205 ಕೋಟಿ ಸೇರಿ ಒಟ್ಟು ₹45790 ಕೋಟಿ ಹಂಚಿಕೆ ಮಾಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾಪ ಮಂಡಿಸಲು ನೋಡಲ್‌ ಏಜೆನ್ಸಿಗಳ ಸಭೆಯು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.