ADVERTISEMENT

ವಿಧಾನಸಭೆ | ₹2 ಕೋಟಿ ಒಳಗಿನ ಕಾಮಗಾರಿ: ಸುತ್ತೋಲೆ ಮಾರ್ಪಾಡಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 16:33 IST
Last Updated 20 ಆಗಸ್ಟ್ 2025, 16:33 IST
ಪಿ.ಎಂ. ನರೇಂದ್ರಸ್ವಾಮಿ
ಪಿ.ಎಂ. ನರೇಂದ್ರಸ್ವಾಮಿ   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಆದ್ದರಿಂದ, ₹2 ಕೋಟಿಯೊಳಗಿನ ಕಾಮಗಾರಿಗಳನ್ನು ‘ಪ್ಯಾಕೇಜ್‌ ಅಡಿ ಮಾಡಬಾರದು ಎಂದು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಬೇಕು ಎಂದು ಎಸ್‌ಸಿಎಸ್‌ಟಿ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ವರದಿಯನ್ನು ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.

2025–26 ನೇ ಸಾಲಿನ ಬಜೆಟ್‌ನಲ್ಲಿ ₹2 ಕೋಟಿಗಳವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರಿಗೆ ಮೀಸಲಾತಿ ಒದಗಿಸುವುದನ್ನು ಘೋಷಿಸಲಾಗಿತ್ತು. ಈ ಸಂಬಂಧ ವಿವಿಧ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸುವಾಗ ಶೇ 23.01 ರಷ್ಟು ಮೀಸಲಾತಿ ನೀಡಲಾಗುತ್ತದೆ. ಆಗ ಕೆಳ ವರ್ಗದ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.

ADVERTISEMENT

ಪ್ರಮುಖ ಅಂಶಗಳು

* ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಬರುವ ಅಭಿವೃದ್ಧಿ ನಿಗಮಗಳ ಅನುದಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನಸಂಖ್ಯೆಗೆ ಪೂರಕವಾಗಿ ಹಂಚಿಕೆ ಆಗಿಲ್ಲ.

* ಹಲವು ದಶಕಗಳ ಹಿಂದಿನ ಯೋಜನೆಗಳೇ ಅಭಿವೃದ್ಧಿ ನಿಗಮಗಳಲ್ಲಿ ಮುಂದುವರೆದಿವೆ. ಇವುಗಳನ್ನು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಬೇಕು.

*ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಲ್ಲಿನ ಹಾಸ್ಟೆಲ್‌ಗಳ ನಿರ್ವಹಣೆಯಲ್ಲಿ ವಾರ್ಡನ್‌ಗಳ ಕೊರತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಶೈಕ್ಷಣಿಕ ಹಾಗೂ ವಸತಿ ವ್ಯವಸ್ಥೆಗೆ ಅನನುಕೂಲವಾಗುತ್ತದೆ. ಇದನ್ನು ಸರ್ಕಾರ ಆದಷ್ಟು ಬೇಗ ಮಾರ್ಪಾಡು ಮಾಡಬೇಕು.

* ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ನೇಮಕಾತಿ, ಪದೋನ್ನತಿ, ಬ್ಯಾಕ್‌ಲಾಗ್‌, ರೋಸ್ಟರ್‌ಗೆ ಸಂಬಂಧಿಸಿದ ವಿಷಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶಗಳು, ಮಾರ್ಗಸೂಚಿಗಳು, ಸುತ್ತೋಲೆಗಳು ಪರಿಣಾಮಕಾರಿಯಾಗಿಲ್ಲ. ಈ ಲೋಪಕ್ಕೆ ಯಾವುದೇ ಶಿಸ್ತು ಕ್ರಮ ಜರುಗಿಸಿರುವುದು ಕಂಡಬಂದಿಲ್ಲ.

* ಎಸ್‌ಸಿ– ಎಸ್‌ಟಿ ಹಾಸ್ಟೆಲ್‌ಗಳು ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಆಹಾರ ಸಾಮಗ್ರಿಗಳ ಟೆಂಡರ್‌ ಪ್ರಕ್ರಿಯೆ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಆರಂಭಿಸಿ ಆಹಾರ ಪೂರೈಕೆ ಸುಗಮವಾಗಿ ನಡೆಸಲು ಕ್ರಮ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.