
ಹರಿಹರ (ದಾವಣಗೆರೆ): ‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಪ್ರಮಾಣ ಏರಿಕೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶೀಘ್ರವೇ ದೆಹಲಿಗೆ ನಿಯೋಗ ತೆರಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಜನಜಾಗೃತಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಶೇ 24.1ಕ್ಕೆ ಏರಿಸಿರುವುದರ ಪರವಾಗಿ ನಾನಿದ್ದೇನೆ. ಇದು ಸಂವಿಧಾನದ 9ನೇ ಪರಿಚ್ಛೇದದಡಿ ಸೇರದಿದ್ದರೆ ರಾಜ್ಯ ಸರ್ಕಾರದ ಪ್ರಯತ್ನ ವ್ಯರ್ಥವಾಗುತ್ತದೆ. ಸಂಸದರೂ ಕೇಂದ್ರ ಸರ್ಕಾರದ ಮೇಲೆ ಈ ಬಗ್ಗೆ ಒತ್ತಡ ಹೇರಬೇಕು’ ಎಂದು ಕೋರಿದರು.
‘2013ಕ್ಕೂ ಮುನ್ನ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ₹ 6,000 ಕೋಟಿ ಮಾತ್ರ ವೆಚ್ಚವಾಗುತ್ತಿತ್ತು. ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಕಾಯ್ದೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ ವೆಚ್ಚ ₹ 42,018 ಕೋಟಿಗೆ ಏರಿದೆ. ಈ ಕಾಯ್ದೆಯಲ್ಲಿ ನ್ಯೂನತೆಗಳು ಇರಬಹುದು. ಇವುಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಮಾತ್ರ ಜಾರಿಗೆ ಬಂದಿದೆ. ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ಹಾಗೂ ₹ 1 ಕೋಟಿವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕಾಯ್ದೆಗಳು ರಾಜ್ಯದಲ್ಲಿ ಮಾತ್ರ ಜಾರಿಗೊಂಡಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿ, ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಏಕೆ ಜಾರಿಗೊಳಿಸಿಲ್ಲ?’ ಎಂದು ಪ್ರಶ್ನಿಸಿದರು.
ಪ್ರಶಸ್ತಿ ಪ್ರದಾನ: ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಅವರಿಗೆ ‘ವಾಲ್ಮೀಕಿ ರತ್ನ’ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಐಜಿ ರವಿ ಚನ್ನಣ್ಣನವರ್ ಅವರಿಗೆ ‘ಮದಕರಿ ನಾಯಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಜಿ.ಕುಮಾರ ನಾಯಕ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಹಾಜರಿದ್ದರು.
ಮೀಸಲಾತಿ ಏರಿಕೆಗೆ ಸಂಬಂಧಿಸಿದ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿದಾಗ ಮಾತ್ರ ಸೌಲಭ್ಯ ಅನುಭವಿಸಲು ಸಾಧ್ಯರುದ್ರಪ್ಪ ಲಮಾಣಿ ವಿಧಾನಸಭೆಯ ಉಪಸಭಾಧ್ಯಕ್ಷ
ಅಂಬೇಡ್ಕರ್ ವಾಲ್ಮೀಕಿ ಕಾಲೊನಿ
‘ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರಿಗೆ ನಿವೇಶನ ನೀಡುವ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆ ರೂಪಿಸಿದೆ. ಇದಕ್ಕೆ ₹ 40 ಕೋಟಿ ಅನುದಾನ ಮೀಸಲಿಟ್ಟಿದೆ. ಅಂಬೇಡ್ಕರ್ ಹಾಗೂ ವಾಲ್ಮೀಕಿ ಕಾಲೊನಿ ನಿರ್ಮಿಸುವ ಈ ಯೋಜನೆಗೆ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೋರಿದರು. ‘ದಲಿತ ಸಮುದಾಯ ಹೆಚ್ಚಾಗಿ ಅವಲಂಬಿತರಾಗಿರುವ ಸರ್ಕಾರಿ ಶಾಲೆ ಸರ್ಕಾರಿ ಆಸ್ಪತ್ರೆಗಳನ್ನು ಸಶಕ್ತಗೊಳಿಸಬೇಕು. ವಸತಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಂಪಿ ಕಿತ್ತೂರು ದಸರಾ ಉತ್ಸವದ ಮಾದರಿಯಲ್ಲಿ ನಾಯಕ ಸಮುದಾಯದ ಇತಿಹಾಸ ಸಾರುವ ದುರ್ಗೋತ್ಸವವನ್ನು ಚಿತ್ರದುರ್ಗದಲ್ಲಿ ಮಾಡಬೇಕು’ ಎಂದೂ ಮನವಿ ಮಾಡಿದರು.
ಸಂಪುಟ ವಿಸ್ತರಣೆ ವೇಳೆ ಪರಿಗಣನೆ
‘ವಾಲ್ಮೀಕಿ ಸಮುದಾಯದ ಇಬ್ಬರು ಸಚಿವರು ಕಾರಣಾಂತರಗಳಿಂದ ರಾಜೀನಾಮೆ ನೀಡುವ ಸ್ಥಿತಿ ಸೃಷ್ಟಿಯಾಯಿತು. ಸಚಿವ ಸ್ಥಾನಕ್ಕಾಗಿ ಸಮುದಾಯ ಬೇಡಿಕೆ ಇಟ್ಟಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಪರಿಗಣಿಸಲಾಗುವುದು’ ಎಂದು ಮುಖ್ಯಮಂತ್ರಿ ಅವರು ಕಾರ್ಯಕ್ರಮ ನಂತರ ನಂತರ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ತಿಳಿಸಿದರು. ‘ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದು. ಅವರು ನನ್ನನ್ನು ಭೇಟಿ ಮಾಡಿಲ್ಲ’ ಎಂದರು. ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಂದ ಪ್ರಶ್ನೆ ಎದುರಾದಾಗ ಸಿದ್ದರಾಮಯ್ಯ ಅವರು ಸಿಡಿಮಿಡಿಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.