ಬೆಂಗಳೂರು: ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ತಿಂಗಳು ಕಳೆದರೂ ಜಾತಿ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ, ವಿವಿಧ ಹುದ್ದೆಗಳ ನೇಮಕಾತಿ ದಿನದಿಂದ ದಿನಕ್ಕೆ ವಿಳಂಬವಾಗುತ್ತಲೇ ಇದೆ.
101 ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವುದಕ್ಕಾಗಿ ಪ್ರವರ್ಗ ಎ, ಬಿ, ಮತ್ತು ಸಿ ಎಂದು ವರ್ಗೀಕರಣ ಮಾಡಲಾಗಿದೆ. ಹೀಗೆ ಮಾಡುವ ಮುನ್ನ ಪರಿಶಿಷ್ಟ ಜಾತಿಯವರ ಜಾತಿ ಪ್ರಮಾಣ ಪತ್ರದಲ್ಲಿ, ಅವರು ಪ್ರತಿನಿಧಿಸುತ್ತಿದ್ದ ಜಾತಿಯನ್ನಷ್ಟೇ ಉಲ್ಲೇಖಿಸಲಾಗುತ್ತಿತ್ತು. ಈಗ ಒಳ ಮೀಸಲಾತಿಗಾಗಿ ಮೂರು ಪ್ರವರ್ಗಗಳನ್ನು ಸೃಷ್ಟಿಸಲಾಗಿದೆ. ನಿರ್ದಿಷ್ಟ ಜಾತಿಗೆ ಸೇರಿದವರು, ಪರಿಶಿಷ್ಟ ಜಾತಿಗಳ ಪಟ್ಟಿಯ ಯಾವ ಪ್ರವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಪ್ರಮಾಣ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಬೇಕಿದೆ. ಈ ಕೆಲಸವನ್ನು ಸಮಾಜ ಕಲ್ಯಾಣ ಇಲಾಖೆಯು ಮಾಡಬೇಕಿದೆ. ಈವರೆಗೂ ಆ ಕೆಲಸ ಆರಂಭವಾಗಿಲ್ಲ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಎಇ), ಕರ್ನಾಟಕ ಲೋಕಸೇವಾ ಆಯೋಗದಂತಹ (ಕೆಪಿಎಸ್‌ಸಿ) ನೇಮಕಾತಿ ಪ್ರಾಧಿಕಾರಗಳು ನೇಮಕಾತಿ ಪ್ರಕ್ರಿಯೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುತ್ತವೆ. ಅರ್ಜಿ ಸಲ್ಲಿಕೆ ವೇಳೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ತಮ್ಮ ಜಾತಿ ಮತ್ತು ಅದರ ಪ್ರವರ್ಗವನ್ನು (ಎ ಅಥವಾ ಬಿ ಅಥವಾ ಸಿ) ಆಯ್ಕೆ ಮಾಡಿಕೊಳ್ಳಬೇಕು. ಪ್ರವರ್ಗವಾರು ಜಾತಿ ಪ್ರಮಾಣ ಪತ್ರ ವಿತರಿಸದೇ ಇರುವ ಕಾರಣಕ್ಕೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವೇ ಆಗುವುದಿಲ್ಲ.
ಜಾತಿ ಪ್ರಮಾಣ ಪತ್ರಗಳಲ್ಲಿ ಆರ್‌ಡಿ (ಕಂದಾಯ ಇಲಾಖೆ) ಸಂಖ್ಯೆ ಇರುತ್ತದೆ. ಅರ್ಜಿ ಸಲ್ಲಿಕೆ ವೇಳೆ ನಮೂದಿಸಲಾಗುವ ಈ ಸಂಖ್ಯೆಯ ಆಧಾರದಲ್ಲಿ, ಜಾತಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಗಳು ಈಗ ನಮೂದಿಸುವ ಸಂಖ್ಯೆ, ಪ್ರವರ್ಗವಾರು ಜಾತಿ ಪ್ರಮಾಣ ಪತ್ರದಲ್ಲಿ ಬದಲಾದರೆ ಒಳ ಮೀಸಲಾತಿ ಅನ್ವಯಕ್ಕೆ ತೊಡಕಾಗುತ್ತದೆ. ಈ ಕಾರಣಕ್ಕೆ ನೇಮಕಾತಿ ಅಧಿಸೂಚನೆ ಹೊರಡಿಸಲು, ನೇಮಕಾತಿ ಪ್ರಾಧಿಕಾರಗಳು ಹಿಂದೇಟು ಹಾಕುತ್ತಿವೆ.
‘ಪ್ರಜಾವಾಣಿ’ ಜತೆ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ‘ಒಳ ಮೀಸಲಾತಿ ಹಂಚಿಕೆ ಮತ್ತು ರೋಸ್ಟರ್ ನಿಗದಿಯ ನಂತರ, ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ 315 (ಸಹಾಯಕ ಲೆಕ್ಕಿಗ ಮತ್ತು ನಿರ್ವಾಹಕ) ಹುದ್ದೆಗಳು ಸೇರಿ ವಿವಿಧ ಇಲಾಖೆಗಳ ಒಟ್ಟು 994 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲು ಸಿದ್ಧರಾಗಿದ್ದೇವೆ. ಪ್ರವರ್ಗವಾರು ಜಾತಿ ಪ್ರಮಾಣ ಪತ್ರ ವಿತರಿಸದೇ ಇದ್ದರೆ, ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ’ ಎಂದರು.
ತಿಂಗಳ ಹಿಂದೆ ಆದೇಶ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಮಾಡಿದ್ದ ಶಿಫಾರಸನ್ನು ಮಾರ್ಪಾಡು ಮಾಡಿದ್ದ ರಾಜ್ಯ ಸರ್ಕಾರ, ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ‘ಎ’, ‘ಬಿ’, ‘ಸಿ’ ಎಂದು ವರ್ಗೀಕರಿಸಿ ಆಗಸ್ಟ್ 28ರಂದೇ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿಗೆ ಲಭ್ಯವಿರುವ ಶೇ 17 ಮೀಸಲಾತಿಯನ್ನು ‘ಎ’ (16 ಜಾತಿಗಳು) ಮತ್ತು ‘ಬಿ’ (19 ಜಾತಿಗಳು) ಪ್ರವರ್ಗಗಳಿಗೆ ತಲಾ ಶೇ 6 ಮತ್ತು ಪ್ರವರ್ಗ ‘ಸಿ’ಗೆ (ಸ್ಪ್ರಶ್ಯ ಮತ್ತು ಅಲೆಮಾರಿ ಸೇರಿ 63 ಜಾತಿಗಳು) ಶೇ 5ರಂತೆ ಹಂಚಿಕೆ ಮಾಡಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಈ ಮೂರು ಸಮುದಾಯಗಳು ತಮ್ಮ ಮೂಲ ಜಾತಿ ತಿಳಿಸದ ಕಾರಣ ಪ್ರವರ್ಗ ‘ಎ’ ಮತ್ತು ‘ಬಿ’ಯಲ್ಲಿ ಮೀಸಲಾತಿ ಪಡೆಯಬಹುದು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಒಳ ಮೀಸಲಾತಿ ಹಂಚಿಕೆಗೆ ಅನುಗುಣವಾಗಿ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ‘ಪರಿಷ್ಕೃತ ಮೀಸಲಾತಿ ರೋಸ್ಟರ್’ (100 ಹುದ್ದೆಗಳಲ್ಲಿ 17 ಹುದ್ದೆಗಳನ್ನು ಪ್ರವರ್ಗ ‘ಎ’, ‘ಬಿ’, ‘ಸಿ’ ಎಂದು ವರ್ಗೀಕರಣ) ಪಟ್ಟಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) ಸೆ. 3ರಂದೇ ಪ್ರಕಟಿಸಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ, ಪ್ರವರ್ಗವಾರು ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಕಾರಿಯೊಬ್ಬರು ಹೇಳಿದರು.
ಪ್ರವರ್ಗವಾರು ಜಾತಿ ಪ್ರಮಾಣಪತ್ರ ವಿತರಣೆ ಆರಂಭವಾಗದೆ ಈ ಜಾತಿಗೆ ಸೇರಿದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆಎಚ್. ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ
ಪರಿಹಾರವಾಗದ ಗೊಂದಲ
‘ನೇಮಕಾತಿ ಪ್ರಾಧಿಕಾರಗಳು 2024ರ ಅ. 28ರ ನಂತರ ಯಾವುದಾದರೂ ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದರೆ ಅವುಗಳನ್ನು ರದ್ದುಗೊಳಿಸಿ ಒಳ ಮೀಸಲಾತಿ ಅಳವಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು 2025ರ ಸೆ. 4ರಂದು ಹೊರಡಿಸಿರುವ ಸುತ್ತೋಲೆ ಗೊಂದಲಕ್ಕೆ ಕಾರಣವಾಗಿದೆ. ತಿದ್ದುಪಡಿ ಅಧಿಸೂಚನೆ ಹೊರಡಿಸಿ ಈಗಾಗಲೇ ಪರೀಕ್ಷೆಗಳು ನಡೆದಿರುವ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಗಳನ್ನೂ ರದ್ದುಪಡಿಸಬೇಕೇ ಎಂಬ ಗೊಂದಲ ಮುಂದುವರಿದಿದೆ. ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಒಟ್ಟು 76 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಈ ಸುತ್ತೋಲೆ ಹೊರಡಿಸುವ ಮೊದಲೇ ಪರೀಕ್ಷೆ ನಡೆಸಿದೆ. ಹೀಗಾಗಿ ಈ ಬಗ್ಗೆ ಸರ್ಕಾರದಿಂದ ಕೆಪಿಎಸ್‌ಸಿ ಸ್ಪಷ್ಟನೆ ಕೇಳಿದೆ ಎಂದು ಡಿಪಿಎಆರ್ ಅಧಿಕಾರಿಯೊಬ್ಬರು ತಿಳಿಸಿದರು.
ನೇಮಕಾತಿಗಾಗಿ ಕಾದಿರುವ ಹುದ್ದೆಗಳು ಇಲಾಖೆ;ಹುದ್ದೆಗಳು ಬಿಡಿಎ (ಎಫ್‌ಡಿಎ ಎಸ್‌ಡಿಎ);25 ಕೆಎಸ್‌ಡಿಎಲ್ (13 ವಿವಿಧ ಹುದ್ದೆ);38 ಕೆಕೆಆರ್‌ಟಿಸಿ (ಸಹಾಯಕ ಲೆಕ್ಕಿಗ ನಿರ್ವಾಹಕರು);315 ಎನ್‌ಡಬ್ಲ್ಯುಕೆಆರ್‌ಟಿಸಿ (ಏಳು ವಿವಿಧ ಹುದ್ದೆ);52 ರಾಜೀವ್ ಗಾಂಧಿ ಆರೋಗ್ಯ ವಿವಿ (ಐದು ವಿವಿಧ ಹುದ್ದೆ);44 ಕೃಷಿ ಮಾರಾಟ (ಆರು ವಿವಿಧ ಹುದ್ದೆ);180 ತಾಂತ್ರಿಕ ಶಿಕ್ಷಣ (ಎಫ್‌ಡಿಎ ಎಸ್‌ಡಿಎ);93 ಶಾಲಾ ಶಿಕ್ಷಣ (ಪದವಿಪೂರ್ವ ಪ್ರಾಂಶುಪಾಲರು);247 ಒಟ್ಟು;994
ಸುಗ್ರೀವಾಜ್ಞೆ ಹೊರಡಿಸಿ: ಆಂಜನೇಯ
‘ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲ ಮತ್ತು ಆತಂಕ ನಿವಾರಣೆಗೆ ಸರ್ಕಾರವು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಒಳ ಮೀಸಲಾತಿ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದು ಮಾಜಿ ಸಚಿವರಾದ ಕಾಂಗ್ರೆಸ್‌ನ ಎಚ್.ಆಂಜನೇಯ ಒತ್ತಾಯಿಸಿದ್ದಾರೆ. ‘ವಿಶ್ವವಿದ್ಯಾಲಯಗಳು ಒಳಗೊಂಡು ಅನೇಕ ಸಂಸ್ಥೆಗಳು ಒಳ ಮೀಸಲಾತಿಗೆ ಸಂಬಂಧಿಸಿದ ಸುತ್ತೋಲೆ ಬಂದಿಲ್ಲ ಎಂದು ಹೇಳುತ್ತಿವೆ ಎಂದು ವರದಿಯಾಗಿದೆ. ಜತೆಗೆ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂದು ಬರೆಯಿಸಿರುವವರು ಪ್ರವರ್ಗ–ಎ ಅಥವಾ ಪ್ರವರ್ಗ–ಬಿ ಎರಡರ ಅಡಿಯಲ್ಲೂ ಒಳ ಮೀಸಲಾತಿ ಪಡೆಯಬಹುದು ಎಂದು ಹೇಳಲಾಗಿದೆ. ಈ ಬಗೆಗಿನ ಗೊಂದಲ ನಿವಾರಿಸುವ ಕೆಲಸವನ್ನು ಸಮಾಜ ಕಲ್ಯಾಣ ಇಲಾಖೆ ಮಾಡಬೇಕು’ ಎಂದಿದ್ದಾರೆ. ‘ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಯವರು ಸಚಿವರ ಜತೆಗೆ ಚರ್ಚಿಸಿ ಕಡತ ಸಿದ್ಧಪಡಿಸಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವಂತೆ ಮಾಡಬೇಕು. ಸುಗ್ರೀವಾಜ್ಞೆ ಹೊರಡಿಸುವುದು ಅತ್ಯಗತ್ಯ ಎಂಬುದನ್ನು ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.