ಡಾ. ಸಿ.ಎನ್. ಅಶ್ವತ್ಥನಾರಾಯಣ
ಬೆಂಗಳೂರು: ಕೆಇಆರ್‌ಸಿ ಮತ್ತು ಕೆಟಿಪಿಪಿ ಕಾಯ್ದೆಯ ನಿಯಮಾವಳಿ ಉಲ್ಲಂಘಿಸಿ ವಿದ್ಯುತ್ ಸ್ಮಾರ್ಟ್ ಮೀಟರ್‌ಗಳ ಖರೀದಿ ಟೆಂಡರ್‌ನಲ್ಲಿ ಸುಮಾರು ₹7,000 ಕೋಟಿಯಷ್ಟು ಹಗರಣ ನಡೆದಿದ್ದು, ಗುತ್ತಿಗೆ ರದ್ದು ಮಾಡಿ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಂಬಂಧ ಅವರು ಗಂಭೀರ ಆರೋಪಗಳು ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಅವರು ಕೆಲವು ದಾಖಲೆಗಳನ್ನೂ ಪ್ರದರ್ಶಿಸಿ ಸಭ್ಯಾಧ್ಯಕ್ಷರ ಮೂಲಕ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕಳುಹಿಸಿದರು.
ಈ ಆರೋಪ ನಿರಾಕರಿಸಿದ ಸಚಿವ ಜಾರ್ಜ್, ‘ನೀವು ಸುಳ್ಳು ಹೇಳುತ್ತಿದ್ದೀರಿ, ಸುಳ್ಳು ಹೇಳುವುದೇ ನಿಮ್ಮ ಕೆಲಸ. ನಾಳೆ ಮುಖ್ಯಮಂತ್ರಿಯವರು ಉತ್ತರ ನೀಡುವುದಕ್ಕೂ ಮೊದಲು ನಿಮ್ಮ ಆರೋಪಗಳಿಗೆ ಉತ್ತರ ಕೊಡುತ್ತೇನೆ. ಈಗ ನೀವು ಮಾತನಾಡಿದ್ದು ನಾಳೆಯ ಪತ್ರಿಕೆಗಳಲ್ಲಿ ದೊಡ್ಡದಾಗಿ ಬರುತ್ತದೆ‘ ಎಂದು ಹರಿಹಾಯ್ದರು.
ರಾಜ್ಯದಲ್ಲಿ 39 ಲಕ್ಷ ಸ್ಮಾರ್ಟ್‌ಗಳನ್ನು ಅಳವಡಿಸಲು ಮುಂದಾಗಿದ್ದಾರೆ. ವರ್ಷಕ್ಕೆ 9 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಕೆ ಗುರಿ ಇದೆ. ಸ್ಮಾರ್ಟ್ ಮೀಟರ್ ಅಳವಡಿಸುವುದು ಐಚ್ಛಿಕ, ಹೊಸ ಗ್ರಾಹಕರಿಗೆ ಕಡ್ಡಾಯ ಎಂದು ಕೆಇಆರ್‌ಸಿ ಮತ್ತು ಕೇಂದ್ರ ಇಂಧನ ಸಚಿವಾಲಯ ಹೇಳಿವೆ. ಆದರೆ ರಾಜ್ಯದಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಅಳವಡಿಸಲು ಹೊರಟಿದ್ದಾರೆ.
ಫೀಡರ್, ಟ್ರಾನ್ಸ್‌ಫಾರ್ಮರ್, ಮತ್ತು ಬೌಂಡರಿ ಮೀಟರ್‌ಗಳಿಗೆ ಸ್ಮಾರ್ಟ್‌ಮೀಟರ್ ಅಳವಡಿಸಬೇಕು. ಎಸ್ಕಾಂ ತನ್ನ ಸ್ವಂತ ಖರ್ಚಿನಲ್ಲಿ ಎಲ್ಲ ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್‌ಗೆ ಬದಲಾಯಿಸಬೇಕು. ಆ ಬಳಿಕವೇ ಹೊಸ ಸಂಪರ್ಕ ಪಡೆಯುವವರಿಗೆ ಸ್ಮಾರ್ಟ್ ಮೀಟರ್ ಖರೀದಿಸಲು ಕಡ್ಡಾಯ ಮಾಡಬೇಕು. ಈ ಕೆಲಸಗಳು ಇನ್ನೂ ಆಗಿಲ್ಲ.
ಇದರ ಗುತ್ತಿಗೆ ಪಡೆದ ಸಂಸ್ಥೆಗೆ ಒಂದು ವರ್ಷ ವಹಿವಾಟು ನಡೆಸಿದೆ. ವಿದ್ಯುತ್ ಕಂಬಗಳನ್ನು ಪೂರೈಕೆ ಮಾಡಿದ ಅರ್ಹತೆ. ಈ ಸಂಸ್ಥೆಗೆ ಸ್ಮಾರ್ಟ್‌ಮೀಟರ್ ಸಾಫ್ಟ್‌ವೇರ್ ಪೂರೈಕೆ ಮಾಡುವ ಕಂಪನಿಯನ್ನು ಉತ್ತರ ಪ್ರದೇಶ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿತ್ತು.
ಸಾಫ್ಟ್‌ವೇರ್ ಪೂರೈಕೆ ಮಾಡುವ ಕಂಪನಿ ಕಪ್ಪು ಪಟ್ಟಿಗೆ ಸೇರಿದ್ದರೆ, ತನಿಖೆ ನಡೆಸಿ ರದ್ದು ಮಾಡಿಸುತ್ತೇನೆ. ಅದಕ್ಕೆ ಸೂಕ್ತ ದಾಖಲೆ ಕೊಡಿಕೆ.ಜೆ.ಜಾರ್ಜ್, ಇಂಧನ ಸಚಿವ
ನೀವು ಖರೀದಿಸಿದ ಸ್ಮಾರ್ಟ್ ಮೀಟರ್ ಮಾರುಕಟ್ಟೆಯಲ್ಲಿ ₹1500ಕ್ಕೆ ಸಿಗುತ್ತದೆ. ನಮ್ಮ ದಾಖಲೆ ಸತ್ಯ ಅಂತಾದರೆ ರಾಜಿನಾಮೆ ಕೊಡುತ್ತೀರಾಎಸ್.ಆರ್.ವಿಶ್ವನಾಥ್, ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.