ADVERTISEMENT

ಒಳ ಮೀಸಲಾತಿ: ಸಿ.ಎಂಗೆ ಇಂದು ವರದಿ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಆಯೋಗದಿಂದ ಶಿಫಾರಸು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 21:50 IST
Last Updated 3 ಆಗಸ್ಟ್ 2025, 21:50 IST
siddaramaiah
siddaramaiah   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ಮಾಡಲು ರಾಜ್ಯ ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗವು ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ (ಆಗಸ್ಟ್‌ 4) ಸಲ್ಲಿಸಲಿದೆ.

‘ಜುಲೈ 30ರಂದೇ ವರದಿ ಸಿದ್ಧವಾಗಿತ್ತು. ಮುಖ್ಯಮಂತ್ರಿಯವರ ಸಮಯಾವಕಾಶ ಕೇಳಿದ್ದರೂ ಕಾರ್ಯ ಒತ್ತಡ ಕಾರಣಕ್ಕೆ ಅವರು ಲಭ್ಯರಾಗಲಿಲ್ಲ. ಹೀಗಾಗಿ, ಸೋಮವಾರ ಬೆಳಿಗ್ಗೆ 11 ಗಂಟೆಗೆ ವರದಿ ಸಲ್ಲಿಸಲು ಸಮಯ ನೀಡಿದ್ದಾರೆ’ ಎಂದು ನಾಗಮೋಹನ್‌ದಾಸ್‌ ತಿಳಿಸಿದರು.

ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಈ ಹಿಂದೆ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಆ ವರದಿಯನ್ನು ಬದಿಗಿಟ್ಟು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಪ್ರತ್ಯೇಕ ವರದಿ ನೀಡಿತ್ತು. ಆ ಸಮಿತಿಯು ಪರಿಶಿಷ್ಟ ಜಾತಿಯನ್ನು ಪ್ರತ್ಯೇಕ ಗುಂಪುಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿತ್ತು. ಈ ಮಧ್ಯೆ, ವಿಧಾನಸಭಾ ಚುನಾವಣೆ ಎದುರಾಯಿತು. ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಳ ಮೀಸಲಾತಿಗಾಗಿ ನಾಗಮೋಹನ್‌ದಾಸ್‌ ಆಯೋಗದ ಮೂಲಕ ಹೊಸದಾಗಿ ಸಮೀಕ್ಷೆ ನಡೆಸಿದೆ. ಈ ಆಯೋಗವು ಜಾತಿಗಳನ್ನು ಯಾವ ರೀತಿ ಗುಂಪುಗಳಾಗಿ ವಿಂಗಡಿಸಿ, ಮೀಸಲಾತಿ ಹಂಚಿಕೆ ಮಾಡಿದೆ ಎಂಬ ಕುತೂಹಲ ಮೂಡಿದೆ.

ADVERTISEMENT

ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ಮೇ 5ರಿಂದ ವಿವಿಧ ಹಂತಗಳಲ್ಲಿ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ’ ನಡೆದಿತ್ತು. ಸಂಗ್ರಹಿಸಲಾದ ದತ್ತಾಂಶಗಳನ್ನು ಇ–ಆಡಳಿತ ಇಲಾಖೆಯ ಸಹಯೋಗದಲ್ಲಿ ವಿಶ್ಲೇಷಿಸಲಾಗಿದೆ. ಮೂಲ ವರದಿಗೆ ಪೂರಕವಾಗಿ ಸಂಪುಟಗಳಲ್ಲಿ ದತ್ತಾಂಶಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 2025ರ ವೇಳೆಗೆ ಪರಿಶಿಷ್ಟ ಜಾತಿಯವರ ಜನಸಂಖ್ಯೆಯನ್ನು ಅಂದಾಜಿಸಿ (1.16 ಕೋಟಿ) ಸಮೀಕ್ಷೆ ನಡೆಸಲಾಗಿದೆ. ಬಿಬಿಎಂಪಿ ಹೊರತುಪಡಿಸಿ, ಜಿಲ್ಲೆಗಳಲ್ಲಿ ಸಮೀಕ್ಷೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. 2025ರ ಅಂದಾಜು ಜನಸಂಖ್ಯೆಗೆ ಹೋಲಿಸಿದರೆ 12 ಜಿಲ್ಲೆಗಳಲ್ಲಿ ಶೇ 100 ಮತ್ತು ಅದಕ್ಕಿಂತ ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಕೆಲವು ಕುಟುಂಬಗಳಿಗೆ ಮೂಲ ಜಾತಿ ಗೊತ್ತಿದ್ದರೂ ಆ ಜಾತಿಗಳು ಪರಿಶಿಷ್ಟ 101 ಜಾತಿ ಪಟ್ಟಿಯಲ್ಲಿ ಇಲ್ಲದ ಕಾರಣ ಸಮೀಕ್ಷೆಯಲ್ಲಿ ನಮೂದಿಸಲು ಸಾಧ್ಯ ಆಗಿಲ್ಲ. ಇನ್ನೂ ಕೆಲವರಿಗೆ ತಮ್ಮ ಮೂಲ ಜಾತಿ ಗೊತ್ತಿದ್ದರೂ ಉಪ ಜಾತಿಯ ಹೆಸರು ಸಾಮಾಜಿಕವಾಗಿ ಅವಮಾನ ಹುಟ್ಟಿಸುವ ಪದಗಳು ಎನ್ನುವುದೂ ಸೇರಿದಂತೆ ನಾನಾ ಕಾರಣಗಳಿಗೆ ಹೇಳಿಕೊಳ್ಳಲು ನಿರಾಕರಿಸಿದ್ದಾರೆ. ಕೆಲವರು ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಎಂದೇ ನಮೂದಿಸಿದ್ದಾರೆ. ಈ ಎಲ್ಲ ಕಾರಣಗಳಿಗೆ ಆಯೋಗ ಸಲ್ಲಿಸುವ ವರದಿಯು ಕುತೂಹಲಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.