ಬೆಂಗಳೂರು:ನಾಡು-ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ, ವಿದ್ವತ್‌ಪೂರ್ಣ ಬರವಣಿಗೆಯ ಮೂಲಕ ಭಾರತೀಯ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದ ಬಹುಭಾಷಾ ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ (89) ಅವರು ಶುಕ್ರವಾರ ಮುಂಜಾನೆ ನಿಧನರಾದರು.
ಕನ್ನಡ, ಇಂಗ್ಲಿಷ್, ಸಂಸ್ಕೃತ ಹಾಗೂ ತಮಿಳು ಭಾಷೆಯಲ್ಲಿ ‘ರಾಮಾಯಣ’ದ ಬಗ್ಗೆ ಉಪನ್ಯಾಸ ನೀಡುತ್ತಿದ್ದ ಅವರು, ‘ರಾಮಾಯಣಾಚಾರ್ಯರು’ ಎಂದೇ ಜನಜನಿತರಾಗಿದ್ದರು.ಮಹಾಭಾರತ, ರಾಮಾಯಣ, ವೇದ, ಸಂಸ್ಕೃತಿ ಮತ್ತು ಸನಾತನ ಪರಂಪರೆಯನ್ನು ತಮ್ಮ ಬರಹದ ಮೂಲಕ ಹೊಸ ತಲೆಮಾರಿಗೆ ಪರಿಚಯಿಸಿದ್ದರು.
ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿಯೇ ಶುಕ್ರವಾರ ಮುಂಜಾನೆ ಮೃತಪಟ್ಟರು. ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ. ಶುಕ್ರವಾರ ಮಧ್ಯಾಹ್ನ 1 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಂಜೆ 5 ಗಂಟೆಗೆಚಾಮರಾಜಪೇಟೆಯ ಟಿ.ಆರ್.ಮಿಲ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಬೆಂಗಳೂರಿನಕನಕನಹಳ್ಳಿಯಲ್ಲಿ1933ರಲ್ಲಿಕೆ.ಎನ್. ಶ್ರೀನಿವಾಸ ದೇಶಿಕಾಚಾರ್ ಮತ್ತುರಂಗನಾಯಕಮ್ಮ ದಂಪತಿಗೆ ಜನಿಸಿದನಾರಾಯಣಾಚಾರ್ಯ ಅವರು, ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿಪದವಿ ಪಡೆದಿದ್ದರು.ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ‘ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವ’ ಎಂಬ ವಿಷಯದ ಮೇಲೆಡಾಕ್ಟರೇಟ್ ಪಡೆದಿದ್ದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿದ ಅವರು, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.
ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಆಚಾರ್ಯ ಚಾಣಕ್ಯ, ತಿರುಪ್ಪಾವೈ’, ತಿರುಮಲೈ, ಸ್ತೋತ್ರರತ್ನಂ, ವಿಶಿಷ್ಟಾದ್ವೈತ ಮೂಲ ಪರಿಕಲ್ಪನೆಗಳು, ವಾಲ್ಮೀಕಿ ಯಾರು?, ಮಹಾಮಾತೆ ಕುಂತಿ ಕಣ್ತೆರೆದಾಗ, ದೇವಕಿಯ ಚಿಂತನೆಗಳು, ಮಹಾ ಪ್ರಸ್ಥಾನ,ಶ್ರೀ ರಾಮಾಯಣದ ಮಹಾ ಪ್ರಸಂಗಗಳು,ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ಧ ಸೇರಿದಂತೆ 180ಕ್ಕೂ ಅಧಿಕ ಕೃತಿ ರಚಿಸಿದ್ದಾರೆ.
ವಿಶ್ವ ರಾಮಾಯಣ ಸಮ್ಮೇಳನದಲ್ಲಿ ‘ವಾಲ್ಮೀಕಿ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್, ಕರ್ನಾಟಕ ಸರ್ಕಾರವು ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿದೆ.ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಎಂಬ ಬಿರುದುಗಳು ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.