ADVERTISEMENT

ಶಾಲಾ ಸಮಯಕ್ಕೆ ಬಸ್ ಸಂಚರಿಸಲಿ: ಸಚಿವರ ಮನವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 18:26 IST
Last Updated 4 ಫೆಬ್ರುವರಿ 2021, 18:26 IST

ಬೆಂಗಳೂರು: ‘ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವ ಕಾರಣ ಮಕ್ಕಳ ಶಾಲಾ ಸಮಯಕ್ಕೆ ಅನುಕೂಲ ಆಗುವಂತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಸಾರಿಗೆ ಸಚಿವರಿಗೆ ಪತ್ರ ಬರೆದಿರುವ ಅವರು, ‘ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯತಿ ಪಾಸುಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿವೆ. ಆದರೆ, ಬಹುತೇಕ ಕಡೆಗಳಲ್ಲಿ ಸರ್ಕಾರಿ ಬಸ್ ಸೌಲಭ್ಯವನ್ನೇ ಅವಲಂಬಿಸಿರುವ ಮಕ್ಕಳು ಶಾಲೆಗಳಿಗೆ ಸರಿಯಾಗಿ ಹಾಜರಾಗುತ್ತಿಲ್ಲವೆಂಬುದು ಇಲಾಖೆಯ ಅಧಿಕಾರಿಗಳ ವರದಿಯಲ್ಲಿ ವ್ಯಕ್ತವಾಗಿದೆ. ಶಾಲಾ ಸಮಯಕ್ಕೆ ಅನುಕೂಲವಾಗುವಂತೆ ಬಸ್‌ ಸಂಖ್ಯೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಕೊರೊನಾ ಕಾರಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್ ಕಾರ್ಯಾಚರಣೆಗೆ ಆರಂಭಿಸದೇ ಇರುವುದರಿಂದ ಈ ಸಮಸ್ಯೆ ಆಗಿರಬಹುದು. ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೇ ಕೆಲವಡೆ ಮಕ್ಕಳು ಗಂಟೆಗಟ್ಟಲೇ ಕಾಯುತ್ತಿದ್ದಾರೆಂಬ ಮತ್ತು ಹಾಗೆಯೇ ಕಾದು ಕಾದು ಶಾಲೆಯ ಸಮಯ ಮೀರಿದ್ದರಿಂದ ಶಾಲೆಗೆ ಬಾರದೇ ಮನೆಯತ್ತಲೇ ಹೆಜ್ಜೆ ಹಾಕಿದ್ದಾರೆಂಬ ವರದಿಗಳೂ ಇವೆ’ ಎಂದೂ ಪತ್ರದಲ್ಲಿ ಸುರೇಶ್ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಬಸ್ ಸೌಲಭ್ಯ ದೊರೆಯದೇ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದರೆ, ಇದರಿಂದ ಶಾಲೆಗಳನ್ನು ಆರಂಭಿಸಿದ ಉದ್ದೇಶ ಸಾಕಾರವಾಗುವುದಿಲ್ಲ. ಸಾರಿಗೆ ಸೌಲಭ್ಯ ತೊಂದರೆಯಿಂದ ಮಕ್ಕಳು ಶಾಲೆಗಳಿಗೆ ಹಾಜರಾಗದೇ ಇರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಹಿನ್ನೆಡೆಗೆ ಕಾರಣ ಆಗಬಾರದು’ ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.