ವಿದ್ಯಾರ್ಥಿನಿಯರು
ಬೆಂಗಳೂರು: ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳು ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದವರೆಗೂ ನಡೆಸುವ ಶಾಲಾ ಪ್ರವೇಶ ಪ್ರಕ್ರಿಯೆಯಲ್ಲಿ ಶೇ 50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಮೀಸಲಿಡುವುದು ಇನ್ನು ಮುಂದೆ ಕಡ್ಡಾಯ.
ರಾಜ್ಯ ಪಠ್ಯಕ್ರಮ ಹಾಗೂ ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ, ಸಹ ಶಿಕ್ಷಣ ಹೊಂದಿರುವ ಎಲ್ಲ ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರವೇಶ ನೀಡುವಾಗ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ತರಗತಿಯಲ್ಲೂ ಲಭ್ಯವಿರುವ ಸೀಟುಗಳಲ್ಲಿ ಶೇ 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಿಡಬೇಕು. ಒಂದು ವೇಳೆ ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೇ ಇದ್ದಾಗ ಉಳಿಕೆ ಸೀಟುಗಳನ್ನು ಬಾಲಕರಿಗೆ ನೀಡಬಹುದು.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಬಹುತೇಕ ಖಾಸಗಿ ಶಾಲೆಗಳಲ್ಲಿ 2025–26ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ. ಈಗ ಹೊರಡಿಸಿದ ನಿಯಮಗಳಿಂದ ಹೆಚ್ಚು ಪ್ರಯೋಜನವಾಗದು ಎಂದು ಹಲವು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕ ಶಿಕ್ಷಣ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಸಿಬಿಎಸ್‌ಇ, ಐಸಿಎಸ್‌ಇ ಬೈ–ಲಾಗಳ ನಿಯಮಗಳಂತೆ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಎಷ್ಟೇ ಕಠಿಣ ಕ್ರಮ ಕೈಗೊಂಡರೂ, ಖಾಸಗಿ ಶಾಲೆಗಳು ಮಾರ್ಚ್, ಏಪ್ರಿಲ್ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ. ಕಳೆದ ನವೆಂಬರ್, ಡಿಸೆಂಬರ್ ವೇಳೆಗೆ ಸುತ್ತೋಲೆ ಹೊರಡಿಸಿದ್ದರೆ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ ಪೋಷಕರಾದ ನಾಗರತ್ನ ಕೋರಿಶೆಟ್ಟಿ, ಅಕ್ಷತಾ ನಾಯಕ್.
ಮೀಸಲಾತಿಯೂ ಅನ್ವಯ
ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳು ಬಾಲಕಿಯರಿಗೆ ಶೇ 50ರಷ್ಟು ಸೀಟು ಮೀಸಲಿಡುವ ಜತೆಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿಯನ್ನು ಪಾಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಅದೇ ಸಮುದಾಯದ ಮಕ್ಕಳಿಗೆ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರತಿ ವರ್ಷವೂ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನವೇ ವೇಳಾಪಟ್ಟಿ, ಶಾಲೆಯಲ್ಲಿ ಲಭ್ಯವಿರುವ ತರಗತಿವಾರು ಸೀಟುಗಳು, ಶುಲ್ಕದ ಮಾಹಿತಿಯನ್ನು ಪ್ರಕಟಿಸಬೇಕು. ಪಾರದರ್ಶಕವಾಗಿ ದಾಖಲಾತಿ ಮಾಡಿಕೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ನಿಯಮಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪೋಷಕರು ಪಟ್ಟಿ ಪರಿಶೀಲಿಸಿ, ಸೂಕ್ತ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಡೊನೇಷನ್ ಸೇರಿದಂತೆ ಅಧಿಕ ಶುಲ್ಕ ವಸೂಲು ಮಾಡಿದರೆ, ಮೀಸಲಾತಿ ಪಾಲನೆಯಾಗದಿದ್ದರೆ ಆಯಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದು ಸಲಹೆ ನೀಡಲಾಗಿದೆ.
ಪ್ರವೇಶ ಪರೀಕ್ಷೆ, ಸಂದರ್ಶನ ನಿಷೇಧ
ಖಾಸಗಿ ಶಾಲೆಗಳು ಪೂರ್ವ ಪ್ರಾಥಮಿಕ, ಒಂದನೇ ತರಗತಿ ಸೇರಿದಂತೆ ಯಾವುದೇ ತರಗತಿಗೆ ಪ್ರವೇಶ ನೀಡಬೇಕಾದರೆ ಶಾಲಾ ಹಂತದಲ್ಲೇ ಕಿರು ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷಿಸಿದ ನಂತರವೇ ಪ್ರವೇಶ ನೀಡುವುದು ಸಾಮಾನ್ಯ ಸಂಗತಿಯಾಗಿದೆ.
ಕೆಲವು ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಮಕ್ಕಳು ಗಳಿಸುವ ಅಂಕಗಳನ್ನು ಶುಲ್ಕ ನಿಗದಿಯ ಮಾನದಂಡವಾಗಿಯೂ ಬಳಸಲಾಗುತ್ತಿದೆ.
ಶಾಲೆಗಳು ಪ್ರವೇಶಕ್ಕಾಗಿ ಪ್ರತ್ಯೇಕ ಪರೀಕ್ಷೆ, ಸಂದರ್ಶನ ನಡೆಸುವಂತಿಲ್ಲ. ನಿರ್ದೇಶನ ಉಲ್ಲಂಘಿಸಿದರೆ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ದಂಡ ವಿಧಿಸಲಾಗುವುದು ಎಂದು ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್‌ಚಂದ್ರ ಎಚ್ಚರಿಸಿದ್ದಾರೆ.
ಮಕ್ಕಳ ಶಾಲಾ ಪ್ರವೇಶ ಪ್ರಕ್ರಿಯೆ ಅತ್ಯಂತ ಸೂಕ್ಷ್ಮ ವಿಚಾರ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ಆದ ಹಕ್ಕುಬಾಧ್ಯತೆ, ಕರ್ತವ್ಯ ಇರುತ್ತದೆ. ಒತ್ತಡ ಹೇರಿದರೆ ಕಾನೂನು ತೊಡಕಾಗುತ್ತದೆಡಿ. ಶಶಿಕುಮಾರ. ಸಂಚಾಲಕ, ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ
ಶಾಲಾ ಪ್ರವೇಶದಲ್ಲಿ ಹೆಣ್ಣು ಮಕ್ಕಳ ಮೀಸಲಾತಿಗೆ ಅವಕಾಶ ಇದ್ದರೂ, ಜಾರಿಗೆ ಒಲವು ತೋರಿರಲಿಲ್ಲ. ಪ್ರತಿ ಶಾಲೆಯೂ ನೆರೆಹೊರೆಯ ಬಾಲಕಿಯರಿಗೆ ಮೊದಲ ಪ್ರಾಶಸ್ತ್ಯ ನೀಡಿದರೆ ಸುತ್ತೋಲೆ ಸಾರ್ಥಕವಾಗುತ್ತದೆ .ವಿ.ಪಿ. ನಿರಂಜನಾರಾಧ್ಯ, ಸದಸ್ಯ, ರಾಜ್ಯ ಶಿಕ್ಷಣ ನೀತಿ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.