ADVERTISEMENT

ಎಸ್‌ಡಿಪಿಐ, ಪಿಎಫ್ಐ ಸಂಘಟನೆ‌ ನಿಷೇಧಿಸಲು ಚಿಂತನೆ: ಸಚಿವ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 8:23 IST
Last Updated 14 ಆಗಸ್ಟ್ 2020, 8:23 IST
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌   

ಚಾಮರಾಜನಗರ: ಬೆಂಗಳೂರಿನ‌ ಡಿ.ಜಿ.ಹಳ್ಳಿಯಲ್ಲಿ‌ ನಡೆದ ಗಲಭೆಯಲ್ಲಿ‌ ಎಸ್‌ಡಿಪಿಐ ಪಾತ್ರ ಬಹಳಷ್ಟಿದೆ. ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ‌ನಿಷೇಧಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದ್ದು, ನನ್ನ ಅಭಿಪ್ರಾಯವೂ ಇದೆ ಆಗಿದೆ ಎಂದು‌ ಪ್ರಾಥಮಿಕ‌ ಮತ್ತು‌ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದರು.

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಗಲಭೆಯಲ್ಲಿ ಎಸ್‌ಡಿಪಿಐ ಪಾತ್ರದ ಬಗ್ಗೆ‌ ಮಾಹಿತಿಗಳು ಹೊರಬರುತ್ತಿವೆ. ನಿಷೇಧದ ಬಗ್ಗೆ ಕೇಳಿ‌ಬರುತ್ತಿರುವ ಬೇಡಿಕೆ ಸರ್ವ ಸಮ್ಮತವಾಗಿದೆ. ಈ ಬಗ್ಗೆ ದೃಢ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಗೃಹ ಸಚಿವರು ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಗಟ್ಟಿಯಾದ ನಿಲುವು ಪ್ರಕಟಿಸಲಿದ್ದಾರೆ' ಎಂದರು.

'ಸಾರ್ವಜನಿಕ ಆಸ್ತಿಗೆ ಆಗಿರುವ ಹಾನಿಯ‌ ವೆಚ್ಚವನ್ನು ಗಲಭೆಕೋರರಿಂದಲೇ ಭರಿಸುವ ಉತ್ತರ ಪ್ರದೇಶ‌ ಮಾದರಿಯ ಕಾನೂನನ್ನು ರಾಜ್ಯದಲ್ಲೂ ಜಾರಿಗೆ ತರಲು ಚಿಂತನೆ‌‌‌‌ ನಡೆಯುತ್ತಿದೆ. ಈ ಸಂಬಂಧ ಹೈಕೋರ್ಟ್ ಹಾಗೂ ಸುಪ್ರೀಂ‌ ಕೋರ್ಟ್ ತೀರ್ಪುಗಳೂ ಇವೆ. ಬಂದ್ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಆದರೆ ಬಂದ್ ಕರೆ‌‌ ನೀಡಿದವರಿಂದಲೇ ಭರಿಸಬೇಕು ಎಂದು ನ್ಯಾಯಾಲಯಗಳು ಹೇಳಿವೆ' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ADVERTISEMENT


'ಕೇಂದ್ರದ ಆದೇಶಕ್ಕೆ‌ ಕಾಯುತ್ತಿದ್ದೇವೆ. ಆಗಸ್ಟ್ 31ರವರೆಗೆ ಶಾಲಾ‌ಕಾಲೇಜುಗಳನ್ನುಬ ತೆರೆಯಲು ಅವಕಾಶ ಇಲ್ಲ. ಕೇಂದ್ರ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆ ಬಳಿಕ ಮುಂದಿನ ತೀರ್ಮಾನ ಪ್ರಕಟಿಸುತ್ತೇವೆ' ಎಂದು ಸುರೇಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.