ADVERTISEMENT

‘ಸೀಟ್‌ ಬ್ಲಾಕಿಂಗ್‌’ ದಂಧೆ: ಮಲ್ಲೇಶ್ವರ ಸೈಬರ್ ಠಾಣೆಯಲ್ಲಿ ಎಫ್‌ಐಆರ್

ಮೂರು ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:22 IST
Last Updated 13 ನವೆಂಬರ್ 2024, 23:22 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ದಂಧೆ ನಡೆಸುತ್ತಿದ್ದವರ ವಿರುದ್ಧ ಮಲ್ಲೇಶ್ವರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ(ಸೈಬರ್)ಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಗದ್ಯಾಳ ನೀಡಿದ ದೂರು ಆಧರಿಸಿ, ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ADVERTISEMENT

‘ಅಭ್ಯರ್ಥಿಗಳ ಲಾಗಿನ್‌, ಪಾಸ್‌ ವರ್ಡ್‌, ಗೋಪ್ಯ ಕೀ ಅನ್ನು ಅನಧಿಕೃತವಾಗಿ ಪಡೆದುಕೊಂಡು ಅವರ ಪರವಾಗಿ ಆಯ್ಕೆ ನಮೂದಿಸಿ ಕೆಲವು ಕಾಲೇಜುಗಳಾದ ಬಿಎಂಎಸ್, ಆಕಾಶ್‌, ನ್ಯೂ ಹೊರೈಜಾನ್‌ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಲಾಭ ಮಾಡಿಕೊಡಲಾಗಿದೆ. ಇತರೆ ಅರ್ಹ ಅಭ್ಯರ್ಥಿಗಳು ವಂಚಿತರಾಗುವಂತೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಂಚಿಸಲಾಗಿದೆ’ ಎಂಬ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಹಲವು ಅಭ್ಯರ್ಥಿಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ, ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಒಂದೇ ಐಪಿ ವಿಳಾಸ ಹಾಗೂ ಅಂತಹ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳ ಖರೀದಿಸಿದವರ ವಿವರಗಳನ್ನು ಪತ್ತೆ ಮಾಡಿಕೊಡಬೇಕು. ಒಂದೇ ಐ.ಪಿ ವಿಳಾಸದಿಂದ ಸೀಟು ಪಡೆದ ವಿದ್ಯಾರ್ಥಿಗಳು, ಕಾಲೇಜುಗಳು ಹಾಗೂ ಸೈಬರ್‌ ಕೇಂದ್ರಗಳವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳಿಗೆ ಕೆಇಎ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ವಿದ್ಯಾರ್ಥಿಗಳು ನೀಡಿದ ಉತ್ತರದ ಮೂಲಕ ಬಹು ನೋಂದಣಿಯಾಗಿದ್ದ ಐ.ಪಿ ವಿಳಾಸಗಳನ್ನು ಗುರುತಿಸಲಾಗಿತ್ತು. ಸುಮಾರು 50 ಐ.ಪಿ ವಿಳಾಸದಿಂದ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಬಹು ಬೇಡಿಕೆ ಇರುವ ಕೋರ್ಸ್‌ಗಳ ಸೀಟು ಪಡೆದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ಇದನ್ನು ಆಧರಿಸಿ ದೂರು ನೀಡಲಾಗಿದೆ.

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2024–25ನೇ ಸಾಲಿಗೆ ನಡೆದಿದ್ದ ಸಿಇಟಿಯಲ್ಲಿ ಉನ್ನತ ರ್‍ಯಾಂಕ್‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಕಾಲೇಜಿಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.