ADVERTISEMENT

ದ್ವಿತೀಯ ಪಿಯುಸಿ ಆನ್‌ಲೈನ್‌ ಪಾಠ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 19:57 IST
Last Updated 14 ಜುಲೈ 2021, 19:57 IST

ಬೆಂಗಳೂರು: ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷ ಗುರುವಾರದಿಂದ (ಜುಲೈ 15) ಆರಂಭವಾಗುತ್ತಿದ್ದು, ನೇರವಾಗಿ ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳಿಗೆಆನ್‌ಲೈನ್‌ನಲ್ಲಿ ಪಾಠ ಬೋಧನೆ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಕಳೆದ ಸಾಲಿನಲ್ಲಿ ಪ್ರೀ ರೆಕಾರ್ಡಿಂಗ್ ಯೂಟ್ಯೂಬ್ ತರಗತಿಗಳನ್ನು ನಡೆಸಿದ ಕಾರಣ ಪ್ರತಿದಿನ ಲಿಂಕ್‌ಗಳನ್ನು ಕಳುಹಿಸಲಾಗುತ್ತಿತ್ತು. ಆದರೆ, ಈ ಬಾರಿ ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ ಎಂಎಸ್‌ ಟೀಮ್‌, ಗೂಗಲ್‌ ಮೀಟ್‌, ಝೂಮ್‌ ಅಥವಾ ಜಿಯೋ ಮೀಟ್‌ ಆ್ಯಪ್‌ಗಳನ್ನು ಬಳಸಿಕೊಂಡು ಪಾಠಗಳನ್ನು ಆರಂಭಿಸಲು ಇಲಾಖೆ ಸೂಚಿಸಿದೆ. ಅಲ್ಲದೆ, ಎಲ್ಲ ತರಗತಿಗಳಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.

ತರಗತಿಗಳಿಗೆ ಉಪನ್ಯಾಸಕರೇ ಸೂಕ್ತ ಲಿಂಕ್‌ಗಳನ್ನು ಸೃಜಿಸಿ, ವಿದ್ಯಾರ್ಥಿಗಳಿಗೆ ಕಳುಹಿಸಬೇಕು. ಎಲ್ಲ ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿ ತೆಗೆದುಕೊಂಡು, ಪ್ರಾಂಶುಪಾಲರಿಗೆ ಪ್ರತಿದಿನದ ಹಾಜರಾತಿ ಮಾಹಿತಿ ಕಳುಹಿಸಬೇಕು. ಯಾವುದಾದರೂ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದೇ ಇದ್ದರೆ ಅಥವಾ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜಿನ ಅದೇ ವಿಷಯದ ಉಪನ್ಯಾಸಕರಿಗೆ ಸರಿ ಹೊಂದಿಸಬೇಕು. ತರಗತಿಗಳನ್ನು ನಡೆಸುವ ಜವಾಬ್ದಾರಿಯನ್ನೂ ನೀಡಬೇಕು.‌ ಈ ಬಗ್ಗೆ ಆಯಾ ಜಿಲ್ಲೆಗಳ ಉಪನಿರ್ದೇಶಕರು ಕಾರ್ಯನಿರ್ವಹಿಸಬೇಕು ಎಂದೂ ಇಲಾಖೆ ನಿರ್ದೇಶನ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.