ADVERTISEMENT

ಹೆಚ್ಚುತ್ತಿರುವ ಅಧರ್ಮ ನೋಡಿಕೊಂಡು ಮಠಾಧೀಶರು ಕಣ್ಮುಚ್ಚಿ ಕೂರಬಾರದು: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:29 IST
Last Updated 12 ಏಪ್ರಿಲ್ 2022, 5:29 IST
   

ಬೆಂಗಳೂರು: ‘ರಾಜ್ಯದಲ್ಲಿ ಈಗ ಇರುವ ಅಶಾಂತಿಯ ವಾತಾವರಣ ವಿರುದ್ಧ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದರು.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ ಜನ್ಮ ದಿನಾಚರಣೆ ಬದಲಾಗಿ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಮಾನತ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಇಂದು ಅಶಾಂತಿ ಇದೆ, ಇದು ಒಳ್ಳೇದಲ್ಲ. ಇಂದಿನ ಧರ್ಮ‌ಸಂಸತ್‌ನಲ್ಲಿ ಹಲವು ಸ್ವಾಮೀಜಿಗಳು ಸೇರಿದ್ದೀರಿ. ಸಮಾನತಾ ದಿನ ಎಂದು ಹೇಳುತ್ತೀರಿ. ಯಾರಿಗೆ ಸಮಾನತೆ ಇದೆ. ಯಾವುದೇ ಧರ್ಮೀಯನಿರಲಿ ಶಾಂತಿಯಿಂದ ಬದುಕುವ ವಾತಾವರಣದ ಬೇಕು. ಅಂಥ ವಾತಾವರಣ ಸೃಷ್ಟಿಯಾಗಲು ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.

‘ನಮ್ಮ ನಮ್ಮ ಧರ್ಮಗಳನ್ನು ನಾವು ಕಾಪಾಡಿ, ಉಳಿಸಿಕೊಳ್ಳಬೇಕು. ನಾವು ಧರ್ಮ ಬಿಟ್ಟರೂ, ನಮ್ಮನ್ನು ಧರ್ಮ‌ ಬಿಡಲ್ಲ. ಹುಟ್ಟಿದಾಗ ಇದೇ ಧರ್ಮದಲ್ಲಿ ಹುಟ್ಟ ಬೇಕು ಎಂದು ಯಾರೂ ಅರ್ಜಿ ಹಾಕ್ಕೊಂಡಿರಲ್ಲ. ಯಾವ ಧರ್ಮದಲ್ಲಿ ಹುಟ್ಟಿರ್ತೀವೋ ಆ ಧರ್ಮದ ಆಚರಣೆ ಮಾಡ್ತೀವಿ. ನಾವು ಧರ್ಮ ಬಿಟ್ರೂ ಸತ್ತಾಗ ನಮ್ಮನ್ನು ಹೂಳಬೇಕೋ, ಸುಡಬೇಕೋ ಎಂದು ನಮ್ಮ ಧರ್ಮವೇ ನಿರ್ಧರಿಸುತ್ತದೆ’ ಎಂದರು.

ADVERTISEMENT

‘ಮೇಕೆದಾಟು ಪಾದಯಾತ್ರೆ ಮಾಡುವಾಗ, ಎಷ್ಟೋ ಸ್ವಾಮೀಜಿಗಳು ಪಾದಯಾತ್ರೆಗೆ ಬರಲು ಹೆದರಿದರು. ಸರ್ಕಾರಕ್ಕೆ ಗಢ ಗಢ ಎಂದು ನಡುಗಿಬಿಟ್ಟರು. ಆದರೆ, ಮುರುಘಾ ಶ್ರೀಗಳು ಒಂದು ಡಜನ್ ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ನನ್ನ ಬೆನ್ನು ತಟ್ಟಿ, ಹೋರಾಟಕ್ಕೆ ಆಶೀರ್ವಾದ ಮಾಡಿದರು. ಇದನ್ನು ನನ್ನ ಜೀವ ಇರುವವರೆಗೂ ಮರೆಯಲು ಸಾಧ್ಯ ಇಲ್ಲ’ ಎಂದರು.

‘ಕಷ್ಟ ಕಾಲದಲ್ಲಿ ಯಾರು ಆಶೀರ್ವಾದ ಮಾಡುತ್ತಾರೊ ಅದೇ ನಮಗೆ ಮುಖ್ಯ. ನಾವು ಹುಟ್ಟುವಾಗ ಯಾವುದೇ ಜಾತಿಗಾಗಿ ಅರ್ಜಿ ಹಾಕಿಲ್ಲ. ಸಾಯುವಾಗ ಮುಹೂರ್ತ ಕೂಡ ಯಾರು ನಿಗದಿ ಮಾಡಿಲ್ಲ. ಹುಟ್ಟು ಸಾವಿನ ನಡುವೆ ನಾವೆಲ್ಲರೂ ಇದ್ದೇವೆ. ಸಮಾಜದ ಎಲ್ಲ ವರ್ಗಕ್ಕೆ ಶಕ್ತಿ ಕೊಟ್ಟವರು ಮುರುಘಾ ಶ್ರೀಗಳು. ನಮ್ಮ ವಯಸ್ಸಿನಲ್ಲಿ ಒಂದೊಂದು ವರ್ಷ ಅವರಿಗೆ ಕೊಟ್ಟು, ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸ ಬೇಕು ಅಷ್ಟೇ’ ಎಂದರು.

ತಮ್ಮ ಮಾತಿನ ವೇಳೆ ಶಿವಕುಮಾರ್‌ ಅವರ ಭಾಷಣವನ್ನು ಹೊಗಳಿದ ಮುರುಘಾ ಶ್ರೀಗಳು, ‘ಡಿ.ಕೆ. ಶಿವಕುಮಾರ್‌ ನಮ್ಮ ನಡುವಿನ ಆಶಾಕಿರಣ. ಈ ಕಾರ್ಯಕ್ರಮದಲ್ಲಿ ಅವರು ಸಿಂಹ ಗರ್ಜನೆ ಮಾಡಿದ್ದಾರೆ. ಅವರಿಗೆ ಉತ್ಸಾಹ ಇದೆ. ಸಾಧಿಸುವ ಜೀವನೋತ್ಸಾಹ ಇದೆ’ ಎಂದರು.

‘ನಾನು ಎಂದೂ ಜನ್ಮದಿನಾಚರಣೆ ಆಚರಿಸಿಕೊಂಡವನಲ್ಲ. ಆ ವಿಚಾರವೂ ನನ್ನಲ್ಲಿ ಇಲ್ಲ. ಆದರೆ, ಅದರ ಬದಲು ಸಮಾನತ ದಿನವಾಗಿ ಮುನ್ನಲೆಗೆ ಬಂದಿದೆ. ಜನ್ಮದಿನಾಚರಣೆ ಇಲ್ಲಿ ಗೌಣವಾಗಿ, ಸಮಾನತೆ ಪ್ರಧಾನವಾಗಿದೆ. ಇಂದು ಸಂತೋಷದ ಯ ವಿಚಾರ. ಹಾರ, ತುರಾಯಿಗಳಿಂದ ಸಾಮಾಜಿಕ ಸುಧಾರಣೆ ಸಾಧ್ಯ ಇಲ್ಲ’ ಎಂದರು.

‘ನಾನು ಶೂನ್ಯದಿಂದ ಬಂದವನು. ವಿದ್ಯಾರ್ಜನೆಗೆ ಮಠಕ್ಕೆ ಬಂದಿದ್ದೆ. ಕಸ ತೆಗೆಯುವುದರಿಂದ ಹಿಡಿದು ಗುರುಗಳ ಬಟ್ಟೆ ತೊಳೆಯುವ ಕೆಲಸವನ್ನೂ ಮಾಡಿದ್ದೇನೆ. ಆ ಪುಣ್ಯ ನನಗೆ ಸಿಕ್ಕಿದೆ. ಗುರುಗಳು ನನ್ನಲ್ಲಿದ್ದ ದಿವ್ಯ ಶಕ್ತಿಯನ್ನು ಗುರುತಿಸಿ ಸಣ್ಣ ಮಠವೊಂದರ ಜವಾಬ್ದಾರಿಯನ್ನು ನೀಡಿದ್ದರು’ ಎಂದು ಗತ ದಿನಗಳನ್ನು ಶ್ರೀಗಳು ನೆನಪಿಸಿದರು.

‘ನಮ್ಮ ಮಠದಲ್ಲಿ ನಾನು ಬಂದ ಮೇಲೆ ಲಿಂಗ ತಾರತಮ್ಯ ನಿವಾರಣೆ ಮಾಡಿದ್ದೇವೆ. ಅಸ್ಪೃಶ್ಯತೆ ನಿವಾರಣೆ ಮಾಡಿದ್ದೇವೆ. ಮಠದಲ್ಲಿ ಸವರ್ಣೀಯ, ದಲಿತ ಎಂಬ ಅಸ್ಪೃಶ್ಯತೆ ಇಲ್ಲ. ಸಹ ಪಂಕ್ತಿ‌ ಭೋಜನ ಇದೆ. ಆದರೆ, ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ. ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಸಮಾಜ, ಸಮಾನತೆ, ಸೇವೆಯೇ ನನ್ನ ಧ್ಯೇಯ. ಅದಕ್ಕಾಗಿ ಜೀವನದಲ್ಲಿ ನೋವು, ಕಷ್ಟಗಳನ್ನು ಕಂಡಿದ್ದೇನೆ’ ಎಂದು ಅವರು ಭಾವುಕರಾದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಸಮಾಜದಲ್ಲಿ ಸಮಾನತೆಗಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ್ದನ್ನು 21ನೇ ಶತಮಾನದಲ್ಲಿ ಮುರುಘಾಶ್ರೀಗಳು ಮಾಡುತ್ತಿದ್ದಾರೆ. ಸಮಾತೆಯ ತೇರು ಎಳೆಯುವ ಶ್ರೀಗಳ ಜೊತೆ ನಾವೆಲ್ಲರೂ ಕೈ ಜೋಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.