ADVERTISEMENT

ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ?

ಶ್ರೀಕಂಠೇಗೌಡ ಹೆಸರು ಕೊನೆಗಳಿಗೆಯಲ್ಲಿ ಬದಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 18:55 IST
Last Updated 18 ಡಿಸೆಂಬರ್ 2018, 18:55 IST
ಎಸ್‌.ಎಲ್. ಧರ್ಮೇಗೌಡ
ಎಸ್‌.ಎಲ್. ಧರ್ಮೇಗೌಡ   

ಬೆಳಗಾವಿ: ವಿಧಾನಪರಿಷತ್ತಿನ ಸಭಾಪತಿ ಹುದ್ದೆಗೆ ಕೊನೆಗಳಿಗೆಯಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿದ ಬಗೆಯಲ್ಲೇ ಉಪ ಸಭಾಪತಿ ಹುದ್ದೆಯ ಚುನಾವಣೆ ಕೂಡ ನಡೆದಿದೆ.

ಈ ಹುದ್ದೆಯ ಆಯ್ಕೆಗೆ ಬುಧವಾರ ಮತದಾನ ನಿಗದಿಯಾಗಿದ್ದು, ಜೆಡಿಎಸ್‌ನ ಎಸ್‌.ಎಲ್. ಧರ್ಮೇಗೌಡ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಅವರೊಬ್ಬರೇ ಕಣದಲ್ಲಿರುವುದರಿಂದ ಅವಿರೋಧ ಆಯ್ಕೆ ಬಹುತೇಕ ಖಚಿತ. ಉಪ ಸಭಾಪತಿ ಹುದ್ದೆ ಜೆಡಿಎಸ್‌ಗೆ ಮೀಸಲಾಗಿತ್ತು. ಈ ಹುದ್ದೆಗಾಗಿ ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಮಧ್ಯೆ ತೀವ್ರ ಪೈಪೋಟಿ ಇತ್ತು. ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಡಿ.ಸಿ. ತಮ್ಮಣ್ಣ ಹಾಗೂ ಸಿ.ಎಸ್‌. ಪುಟ್ಟರಾಜು ಇಬ್ಬರು ಸಚಿವರಾಗಿದ್ದಾರೆ. ಮತ್ತೊಂದು ಸ್ಥಾನವನ್ನು ಈ ಜಿಲ್ಲೆಗೆ ನೀಡುವುದು ಬೇಡ ಎಂಬ ಕಾರಣಕ್ಕೆ ಧರ್ಮೇಗೌಡ ಹೆಸರು ಮುಂಚೂಣಿಗೆ ಬಂದಿತು ಎನ್ನಲಾಗಿದೆ.

ಮಾಜಿ ಶಾಸಕ ಎಸ್.ಆರ್‌. ಲಕ್ಷ್ಮಯ್ಯ ಪುತ್ರರಾದ ಧರ್ಮೇಗೌಡ ಒಂದು ಬಾರಿ ಬೀರೂರು ಕ್ಷೇತ್ರದ ಶಾಸಕರಾಗಿ ಗೆದ್ದಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬೀರೂರು ಕ್ಷೇತ್ರ ಕಾಣೆಯಾಗಿತ್ತು. ಗೌಡರಿಗೆ ಕ್ಷೇತ್ರ ಇರಲಿಲ್ಲ. ಮೈತ್ರಿ ಸರ್ಕಾರ ಬಂದ ಬಳಿಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಧರ್ಮೇಗೌಡ ಆಯ್ಕೆಯಾಗಿದ್ದರು. ಇವರ ಸೋದರ ಎಸ್.ಎಲ್‌. ಭೋಜೇಗೌಡ ವಿಧಾನಪರಿಷತ್ತಿನ ಸದಸ್ಯರಾಗಿದ್ದಾರೆ.

ADVERTISEMENT

ಕೈಕೊಟ್ಟ ರೇವಣ್ಣ ಮುಹೂರ್ತ!: ಸಚಿವ ಎಚ್.ಡಿ.ರೇವಣ್ಣ ಇಟ್ಟ ಮುಹೂರ್ತ ಕೊನೆಗೂ ಕೈಕೊಟ್ಟಿದೆ! ಕಳೆದ ಮಂಗಳವಾರ ಉಪಸಭಾಪತಿ ಚುನಾವಣೆ ಪ್ರಕ್ರಿಯೆ ಆರಂಭಿಸಲು ರೇವಣ್ಣ ಮುಹೂರ್ತ ಇಟ್ಟಿದ್ದರು. ಆದರೆ, ಅವರ ಇಚ್ಛೆಯಂತೆ ನಡೆಯಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.