ADVERTISEMENT

ಮೈಕ್ರೊ ಫೈನಾನ್ಸ್‌ಗಳಿಗೆ ‘ಸ್ತ್ರೀಶಕ್ತಿ’ಯೇ ಶಾಖೆ

ಸ್ವಸಹಾಯ ಗುಂಪುಗಳೇ ಮೈಕ್ರೊ ಫೈನಾನ್ಸ್‌ಗಳ ಮೊದಲ ಗುರಿ | ಕಡಿಮೆ ಬಡ್ಡಿಯ ಆಮಿಷವೊಡ್ಡಿ ಸಾಲದ ಸುಳಿಗೆ

ಚಂದ್ರಹಾಸ ಹಿರೇಮಳಲಿ
Published 7 ಫೆಬ್ರುವರಿ 2025, 23:35 IST
Last Updated 7 ಫೆಬ್ರುವರಿ 2025, 23:35 IST
   

ಬೆಂಗಳೂರು: ಎರಡೂವರೆ ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ‘ಸ್ತ್ರಿಶಕ್ತಿ’ ಯೋಜನೆ ಬಡ ಮತ್ತು ತಳವರ್ಗದ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿ, ಸಬಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದ್ದರೂ, ಯೋಜನೆಯಡಿ ರಚಿಸಿದ ಸ್ವಸಹಾಯ ಗುಂಪುಗಳೇ ಇಂದು ‘ಮೈಕ್ರೊ ಫೈನಾನ್ಸ್‌’ಗಳ ವಹಿವಾಟು ವಿಸ್ತರಣೆಯ ಶಾಖೆಗಳಾಗಿವೆ.

ಸ್ತ್ರೀಶಕ್ತಿ ಗುಂಪುಗಳನ್ನೇ ಬಂಡವಾಳ ಮಾಡಿಕೊಂಡ ಕೆಲ ರಾಜಕಾರಣಿಗಳು, ಮಠಾಧೀಶರು, ಧರ್ಮ ಪ್ರವರ್ತಕರು, ಗುತ್ತಿಗೆದಾರರು, ಉದ್ಯಮಿಗಳು ಹಲವು ಜಿಲ್ಲೆಗಳಲ್ಲಿ ತಮ್ಮ ಸಂಸ್ಥೆಗಳ ಮೂಲಕ ಆರ್ಥಿಕ ವಹಿವಾಟು ವಿಸ್ತರಿಸಿಕೊಂಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಐಎಎಸ್‌, ಕೆಎಎಸ್‌ನಂತಹ ಅಧಿಕಾರಿ ವರ್ಗವೂ ಬೇನಾಮಿ ಮೈಕ್ರೊ ಫೈನಾನ್ಸ್‌ಗಳಲ್ಲಿ ಬಂಡವಾಳ ಹೂಡಿವೆ. ಸಮಾಜ ಸೇವೆ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ತರಬೇತಿ ಹೆಸರಲ್ಲಿ ಕೆಲವರು ಹಣಕಾಸು ವಹಿವಾಟು ನಡೆಸುತ್ತಿದ್ದಾರೆ. 

ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರ ಸಬಲೀಕರಣ, ಸಾಮಾಜಿಕ ಬದಲಾಣೆಗೆ ಸೂಕ್ತ ವಾತಾವರಣ ಹಾಗೂ ಆತ್ಮವಿಶ್ವಾಸ ಮೂಡಿಸಲು, ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸಲು, ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ ಆರ್ಥಿಕ ಸ್ಥಿರತೆ ಸಾಧಿಸಲು, ವಿವಿಧ ಇಲಾಖೆಗಳ ಅಭಿವೃದ್ಧಿಯ ಫಲ ದೊರಕಿಸುವ ಮಹತ್ವದ ಉದ್ದೇಶಗಳೊಂದಿಗೆ 2000-01ನೇ ಸಾಲಿನಲ್ಲಿ ‘ಸ್ತ್ರೀಶಕ್ತಿ ಯೋಜನೆ’ ಅನುಷ್ಠಾನಗೊಳಿಸಲಾಗಿತ್ತು. ಪ್ರಸ್ತುತ ಕರ್ನಾಟಕದಲ್ಲಿ 1.65 ಲಕ್ಷ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿವೆ. ಸರ್ಕಾರದ ಸಹಾಯ ಧನ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ಸಾಲದ ಮೂಲಕ ನಡೆಸುತ್ತಿರುವ ವಹಿವಾಟು ₹4 ಸಾವಿರ ಕೋಟಿ ದಾಟಿದೆ. ಇದರ ಎರಡುಪಟ್ಟು ಹಣವನ್ನು ಸ್ತ್ರೀಶಕ್ತಿ ಗುಂಪುಗಳು ಮೈಕ್ರೊ ಫೈನಾನ್ಸ್‌ಗಳ ಮೂಲಕ ಪಡೆದು, ವಹಿವಾಟು ನಡೆಸುತ್ತಿವೆ. 

ADVERTISEMENT

ಸಣ್ಣಮೊತ್ತದಿಂದ ದೊಡ್ಡ ಮೊತ್ತದವರೆಗೆ: 

ಮೈಕ್ರೊ ಫೈನಾನ್ಸ್‌ಗಳು ಸ್ತ್ರೀಶಕ್ತಿ ಗುಂಪುಗಳಿಗೆ ಮೊದಲು ಸಣ್ಣ ಪ್ರಮಾಣದ ಸಾಲ ನೀಡುತ್ತವೆ. ತೀರುವಳಿ ಬಳಿಕ ಮೊದಲು ನೀಡಿದ್ದ ಪ್ರಮಾಣದ ಮೇಲೆ ಶೇಕಡವಾರು ಹೆಚ್ಚಿಸಿ, ಸಾಲ ನೀಡುತ್ತಾ ಹೋಗುತ್ತವೆ. ಮುಂದೆ ದೊಡ್ಡ ಮೊತ್ತದ ಸಾಲ ಪಡೆಯಲು ಮರುಪಾವತಿಯಲ್ಲಿ ವಿಳಂಬವಾಗದಂತೆ ಗುಂಪುಗಳ ಎಲ್ಲ ಸದಸ್ಯರು ಗಮನ ಹರಿಸುತ್ತಾರೆ.

‘2018ರಲ್ಲಿ ಮೊದಲಿಗೆ 15 ಮಹಿಳೆಯರಿದ್ದ ನಮ್ಮ ಗುಂಪಿಗೆ ಮೈಕ್ರೊ ಫೈನಾನ್ಸ್‌ ಸಂಸ್ಥೆಯೊಂದು ₹30 ಸಾವಿರ ಸಾಲ ನೀಡಿತ್ತು. ತಲಾ ₹1,500 ಹಂಚಿಕೊಂಡಿದ್ದೆವು. ಈಗ ಆ ಮೊತ್ತ ₹3 ಲಕ್ಷ ತಲುಪಿದೆ. ತಲಾ ₹20 ಸಾವಿರ ಸಾಲ ಪಡೆಯಬಹುದು. ಬೇರೆ ಸದಸ್ಯರಿಗೆ ಸಾಲದ ಅಗತ್ಯವಿಲ್ಲದಿದ್ದರೆ, ಒಬ್ಬರಿಗೆ ಅಧಿಕ ಮೊತ್ತದ ಆವಶ್ಯವಿದ್ದಾಗ ಉಳಿದವರು ಸಹಕರಿಸುತ್ತಾರೆ. ಕೆಲವೊಮ್ಮೆ ನಿಧನ ಇತರೆ ಕಾರಣಗಳಿಂದ ಕಂತು ಪಾವತಿ ಸ್ಥಗಿತವಾಗುತ್ತವೆ. ಆಗ ಉಳಿದವರು ಸಮನಾಗಿ ಹಂಚಿಕೊಂಡು ತೀರಿಸುತ್ತೇವೆ’ ಎನ್ನುತ್ತಾರೆ ಭಿನ್ನಮಂಗಲದ ಶುಭ. 

ಸ್ತ್ರೀಶಕ್ತಿಗೂ ತಟ್ಟಿದ ಒತ್ತಡದ ಬಿಸಿ: 

ಹಲವು ಜಿಲ್ಲೆಗಳಲ್ಲಿ ಮೊದಲು ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುತ್ತಿದ್ದ ಮೈಕ್ರೊ ಫೈನಾನ್ಸ್‌ಗಳು ಕಾಯಂ ಗ್ರಾಹಕರಾಗುತ್ತಿದ್ದಂತೆ ನಿಧಾನವಾಗಿ ಬಡ್ಡಿ ದರ ಏರಿಸುತ್ತಾ ಹೋಗುತ್ತವೆ. ಒಂದು ಗುಂಪಿನಲ್ಲಿ ಸಾಲ ಮರುಪಾತಿಸದ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಉಳಿದ ಸದಸ್ಯರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಫೈನಾನ್ಸ್‌ ಪ್ರಮುಖರ ಒತ್ತಡವೂ ಆರಂಭವಾಗುತ್ತದೆ.

‘ಕೆಲ ಮೈಕ್ರೊ ಫೈನಾನ್ಸ್‌ ಕಂಪನಿಗಳು ಸಿಬ್ಬಂದಿ ಮೂಲಕ ಸಾಲನೀಡುವ ಆಸೆ ತೋರಿಸುತ್ತವೆ. ಕಡಿಮೆ ಬಡ್ಡಿಗೆ ಸಾಲ ಆಮಿಷದೊಂದಿಗೆ ಗ್ರಾಮೀಣ ಮಹಿಳೆಯರನ್ನು ಸಾಲದ ಸುಳಿಗೆ ಸಿಲುಕಿಸುತ್ತಾರೆ’ ಎಂದು ಜಗಳೂರು ತಾಲ್ಲೂಕಿನ ಮಹಿಳೆಯೊಬ್ಬರು ಹೇಳಿದರು.  

ಬೆಳಗಾವಿ ತಾಲ್ಲೂಕಿನ ಹಾಲಭಾವಿ ಗ್ರಾಮದಲ್ಲಿ ಮೈಕ್ರೊ ಫೈನಾನ್ಸ್‌ ಸಂಸ್ಥೆಯೊಂದು ₹100 ಕೋಟಿಗೂ ಹೆಚ್ಚು ಹಣ ವಂಚಿಸಿದ ಪ್ರಕರಣ ನಡೆದಿದೆ. ಇದರಲ್ಲಿ ವಿವಿಧ ಗ್ರಾಮಗಳ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಕ್ರೊ ಫೈನಾನ್ಸ್‌ ಕಂಪನಿಯ ಒಬ್ಬ ಪ್ರತಿನಿಧಿ ಸಾಲ ಪಡೆದ ಮಹಿಳೆಯರಿಂದ ಅರ್ಧದಷ್ಟು ಹಣ ಪಡೆದು ವಂಚಿಸಿದ್ದಾನೆ.  

ಸಾಲದ ಮೇಲೆ ಶೇ 50ರಷ್ಟು ಸಬ್ಸಿಡಿ ಕೊಡಿಸುತ್ತೇವೆ ಎಂದು ನಂಬಿಸಿ ಬೆಳಗಾವಿ ತಾಲ್ಲೂಕಿನ ಯಮನಾಪುರ ಗ್ರಾಮದಲ್ಲಿ 7,000ಕ್ಕೂ ಹೆಚ್ಚು ಮಹಿಳೆಯರಿಗೆ ಸಾಲ ಕೊಡಿಸಿದ್ದಾರೆ. ಮಂಜೂರಾಗಿದ್ದ ಸಾಲದಲ್ಲಿ ಅರ್ಧದಷ್ಟು ಸ್ವತಃ ಬಳಸಿಕೊಂಡಿದ್ದಾರೆ. ಈಗ ಸಾಲದ ಪೂರ್ಣ ಅಸಲು ತುಂಬುವಂತೆ ಫೈನಾನ್ಸ್‌ನವರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. 

ಫೈನಾನ್ಸ್‌ ಅವಲಂಬನೆ ತಪ್ಪಿಸಿದ ‘ಸಂಜೀವಿನಿ’

ಹಲವು ಜಿಲ್ಲೆಗಳಲ್ಲಿ ಮಹಿಳಾ ಸ್ವ ಸಹಾಯ ಸಂಘಗಳು ಯಶಸ್ವಿಯಾಗಿ ಸ್ತ್ರೀ ಸ್ವಾವಲಂಬನೆಗೆ ಬೆನ್ನೆಲುಬಾಗಿವೆ. ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಮಹಿಳಾ ಒಕ್ಕೂಟಗಳು ಮಹಿಳೆಯರಿಗೆ ಸ್ವದ್ಯೋಗಕ್ಕಾಗಿ ಸಾಲ ನೀಡುತ್ತಾ, ಅವರು ಮೈಕ್ರೊ ಫೈನಾನ್ಸ್‌ ಸಾಲದ ಸುಳಿಗೆ ಸಿಲುಕಿಕೊಳ್ಳದಂತೆ ಮಾಡಿವೆ.

ಉದಾಹರಣೆಗೆ ಉಡುಪಿ ಜಿಲ್ಲೆಯಲ್ಲಿ 8,454 ಸಂಜೀವಿನಿ ಸ್ವಸಹಾಯ ಸಂಘಗಳಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲ ಜಿಲ್ಲೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ, ವಾಹನ ಚಾಲನೆ, ಆಹಾರ ಪದಾರ್ಥಗಳ ತಯಾರಿಕೆ, ಗುಡಿ ಕೈಗಾರಿಕೆ, ಅಂಗಡಿ, ಹೋಟೆಲ್‌, ಕ್ಯಾಂಟೀನ್‌ಗಳ ನಿರ್ವಹಣೆ ಮೊದಲಾದ ಸ್ವಯಂ ಉದ್ಯೋಗ ವಹಿವಾಟು ನಡೆಸುತ್ತಿವೆ. 

ದಾವಣಗೆರೆ ಜಿಲ್ಲೆ ಕಾಡಜ್ಜಿಯ ‘ಕಾವೇರಿ ಸ್ವ-ಸಹಾಯ ಸಂಘ’ ಸೇರಿ ಹಲವು ಸಂಘಗಳು ಯಶಸ್ವಿಯಾಗಿವೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ನಗರದಲ್ಲಿ ‘ಅಕ್ಕ ಕೆಫೆ’ ಆರಂಭಿಸಿದೆ.

ಮರು ಪಾವತಿಯ ‘ಗ್ಯಾರಂಟಿ’ 

ರೈತರು, ಸಣ್ಣ ವ್ಯಾಪಾರಿಗಳು, ಪುರುಷರಿಗಿಂತ ಸಾಲ ನೀಡಲು ಸ್ತ್ರಿಶಕ್ತಿ ಸ್ವಸಹಾಯ ಗುಂಪುಗಳನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಸಾಲ ಮರುಪಾವತಿ ಗ್ಯಾರಂಟಿ. ನೀಡಿದ ಸಾಲದ ಮೊತ್ತಕ್ಕೆ ಗುಂಪಿನ ಎಲ್ಲ ಮಹಿಳೆಯರನ್ನೂ ಹೊಣೆ ಮಾಡಲಾಗುತ್ತದೆ. ಸಾಲಪಡೆದವರು ಪ್ರತಿ ವಾರ ನಿಗದಿತ ದಿನ ಗುಂಪಿನ ಮುಖ್ಯಸ್ಥರಿಗೆ ಹಣ ತಲುಪಿಸಬೇಕು. ಒಬ್ಬಿಬ್ಬರು ಕಟ್ಟದಿದ್ದರೆ, ವಿಳಂಬಿಸಿದರೆ  ಉಳಿದವರು ಒತ್ತಡ ಹೇರುತ್ತಾರೆ. ಇಲ್ಲವೇ, ಎಲ್ಲರೂ ಸೇರಿ ಸಾಲ ಮರುಪಾವತಿಸದವರ ಕಂತು ಭರಿಸುತ್ತಾರೆ. ಹೀಗೆ ಸಾಲದ ಮೊತ್ತ ಹಿಂದಿರುಗುವ ಗ್ಯಾರಂಟಿ ಇರುವ ಕಾರಣಕ್ಕೇ ಸ್ತ್ರೀಶಕ್ತಿ ಗುಂಪಗಳಿಗೆ ಮೈಕ್ರೊ ಫೈನಾನ್ಸ್‌ಗಳು ಮುಗಿಬಿದ್ದು ಸಾಲ ನೀಡುತ್ತಿವೆ. 

ರಾಜಕಾರಣಿಗಳಿಗೆ ‘ಮತದ ಫಸಲು’

ಸಮಾಜ ಸೇವೆ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ತರಬೇತಿ ಹೆಸರಿನಲ್ಲಿ ಹಲವು ರಾಜಕಾರಣಿಗಳು
ಮೈಕ್ರೊ ಫೈನಾನ್ಸ್‌, ಸಹಕಾರ ಸಂಘಗಳ ಮೂಲಕ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡಿವೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ರಾಜಕಾರಣಿಗಳ ಒಡೆತನದ ಮೈಕ್ರೊ ಫೈನಾನ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸೇವೆಯ ನೆಪದಲ್ಲಿ ಚುನಾವಣೆ ವೇಳೆ ಇಂತಹ ಗುಂಪುಗಳ ಮೂಲಕವೇ ಮತಕ್ಕಾಗಿ ಹಣ ನೀಡಲಾಗುತ್ತದೆ ಎಂಬ ಆರೋಪಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.