ADVERTISEMENT

ಅಟೆಂಡರ್ ಕೈಯಿಂದ ನ್ಯಾಯಾಲಯ ಕಟ್ಟಡ ಉದ್ಘಾಟನೆ: ನ್ಯಾಯಾಧೀಶರ ಕಾರ್ಯಕ್ಕೆ ಪ್ರಶಂಸೆ

ಸರಳತೆ ಮೆರೆದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 14:36 IST
Last Updated 2 ಮಾರ್ಚ್ 2020, 14:36 IST
ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣವನ್ನು ಹಿರಿಯ ಅಟೆಂಡರ್‌ ಜಯರಾಜ ತ್ರಿಮೋತಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣವನ್ನು ಹಿರಿಯ ಅಟೆಂಡರ್‌ ಜಯರಾಜ ತ್ರಿಮೋತಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.   

ಚಿಕ್ಕಬಳ್ಳಾಪುರ: ನಗರದಲ್ಲಿ ₹11.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡವನ್ನು ಮುಖ್ಯ ನ್ಯಾಯಮೂರ್ತಿಗಳುಜಿಲ್ಲಾ ನ್ಯಾಯಾಲಯದ ಹಿರಿಯ ಅಟೆಂಡರ್‌ ಕೈಯಿಂದ ಉದ್ಘಾಟನೆ ಮಾಡಿಸಿ, ಔದಾರ್ಯ ಮೆರೆದಿದ್ದಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಉಪಸ್ಥಿತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯದ ಹಿರಿಯ ಅಟೆಂಡರ್‌ ಜಯರಾಜ ತ್ರಿಮೋತಿ ಅವರು ರಿಬ್ಬನ್‌ ಕತ್ತರಿಸುವ ಮೂಲಕ ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಅಭಯ್ ಅವರ ಹೃದಯ ವೈಶಾಲ್ಯತೆಯಿಂದಾಗಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಇಡೀ ಕಾರ್ಯಕ್ರಮವನ್ನು ಆಡಂಬರವಿಲ್ಲದಂತೆ ಆಯೋಜಿಸಲಾಗಿತ್ತು. ಅದರ ಜತೆಗೆ ಅಟೆಂಡರ್‌ ಅವರಿಂದ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸುವ ಮೂಲಕ ನ್ಯಾಯಮೂರ್ತಿಗಳು ತೋರಿದ ಸರಳತೆ ಇತರರಿಗೆ ಮಾದರಿಯಾಗಿತ್ತು.

ADVERTISEMENT

ಕೋಲಾರ ತಾಲ್ಲೂಕಿನ ಈಲಂ ನಿವಾಸಿಯಾಗಿರುವ ಅಟೆಂಡರ್‌ ಜಯರಾಜ ಅವರು ಕಳೆದ 31 ವರ್ಷಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಸೇವೆಯಲ್ಲಿದ್ದು, ನಿವೃತ್ತಿಗೆ ಇನ್ನು ಒಂದೇ ವರ್ಷ ಬಾಕಿ ಇದೆ. ಈ ಹಿಂದೆ ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇವರು, ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು, ಇಲ್ಲಿ ಜಿಲ್ಲಾ ನ್ಯಾಯಾಲಯ ಕಾರ್ಯಾರಂಭ ಮಾಡುತ್ತಿದ್ದಂತೆ ಚಿಕ್ಕಬಳ್ಳಾಪುರಕ್ಕೆ ವರ್ಗವಾಗಿ ಬಂದಿದ್ದಾರೆ. ಕಳೆದ 13 ವರ್ಷಗಳಿಂದ ನಗರದಲ್ಲಿಯೇ ನೆಲೆಸಿದ್ದಾರೆ.

ಅನಿರೀಕ್ಷಿತವಾಗಿ ಬಂದ ಸುರ್ವಣಾವಕಾಶ ಕುರಿತಂತೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಯರಾಜ ಅವರು, ‘ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಒಂದು ವಾರ ಮುಂಚಿತವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅವರು ನನ್ನನ್ನು ಕರೆಯಿಸಿ, ಹೊಸ ಕಟ್ಟಡವನ್ನು ನೀನೇ ಉದ್ಘಾಟಿಸಬೇಕು ಎಂದಾಗ ನಂಬದಾಗಿದ್ದೆ. ನನ್ನಂತಹ ಒಬ್ಬ ‘ಡಿ’ ದರ್ಜೆ ನೌಕರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಎದುರು ಅಂತಹ ಭವ್ಯ ಕಟ್ಟಡ ಉದ್ಘಾಟಿಸುವುದು ನಾನು ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ’ ಎಂದು ಹೇಳಿದರು.

‘ಅಷ್ಟೊಂದು ಜನರು, ಸಚಿವರು, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಎದುರು ರಿಬ್ಬನ್ ಕತ್ತರಿಸುವ ಅವಕಾಶ ಸಿಕ್ಕಿದ್ದು ನನ್ನಭಾಗ್ಯ ಎಂದು ಭಾವಿಸಿರುವೆ. ನನಗೆ ಪದಗಳಲ್ಲಿ ಹೇಳಿಕೊಳ್ಳಲಾಗದಷ್ಟು ಸಂತಸವಾಗಿದೆ. ಇಷ್ಟು ವರ್ಷ ಸೇವೆ ಮಾಡಿದ್ದು ಇಂತಹ ಒಂದು ಅವಕಾಶದಿಂದಾಗಿ ಸಾರ್ಥಕವಾಯಿತು ಎನಿಸಿತು. ಪ್ರತಿಯೊಬ್ಬ ನ್ಯಾಯಮೂರ್ತಿಗಳ ದೊಡ್ಡಗುಣ ನಮ್ಮಂತಹ ಸಣ್ಣ ನೌಕರರಿಗೆ ದೊಡ್ಡ ಆತ್ಮವಿಶ್ವಾಸ, ಆತ್ಮಬಲ ತುಂಬಿದೆ. ಅದಕ್ಕಾಗಿ ಈ ಅವಕಾಶ ಕಲ್ಪಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳಬಯಸುತ್ತೇನೆ’ ಎಂದರು.

‘ನಾವು ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣ ಉದ್ಘಾಟನೆಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ಅವರಿಗೆ ಆಹ್ವಾನಿಸಿದಾಗ ಅವರು ಕಾರ್ಯಕ್ರಮಕ್ಕೆ ದುಂದು ವೆಚ್ಚ ಮಾಡದಂತೆ, ಸರಳವಾಗಿ ಕಾರ್ಯಕ್ರಮ ಆಯೋಜಿಸುವಂತೆ ಹೇಳುವ ಜತೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಅಟೆಂಡರ್‌ ಕೈಯಲ್ಲಿ ನೂತನ ಕಟ್ಟಡ ಉದ್ಘಾಟಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಅವರ ಇಚ್ಛೆಯಂತೆ ನಾವು ಕಾರ್ಯಕ್ರಮ ರೂಪಿಸಿದ್ದೆವು’ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.