ADVERTISEMENT

ರಾಜ್ಯದಲ್ಲಿ ಶೇ 75ರಷ್ಟು ಬಿಪಿಎಲ್ ಕಾರ್ಡ್: ಸಚಿವ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 12:48 IST
Last Updated 11 ಜನವರಿ 2026, 12:48 IST
<div class="paragraphs"><p>ಕೆ.ಎಚ್.ಮುನಿಯಪ್ಪ</p></div>

ಕೆ.ಎಚ್.ಮುನಿಯಪ್ಪ

   

ಕಲಬುರಗಿ: ‘ಯಾವುದೇ ರಾಜ್ಯದಲ್ಲಿ ಜನಸಂಖ್ಯೆಯ ಶೇ 50ಕ್ಕಿಂತ ಅಧಿಕ ಬಿಪಿಎಲ್‌ ಕಾರ್ಡ್‌ಗಳು ಇರಬಾರದು ಎಂಬ ನಿಯಮವಿದೆ. ಆದರೂ ಕರ್ನಾಟಕದಲ್ಲಿ ಶೇ 75ರಷ್ಟು ಕಾರ್ಡ್‌ಗಳಿವೆ. ಮಹಾರಾಷ್ಟ್ರ ನಂತರ ಕರ್ನಾಟಕ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದ್ದರೂ ಅತಿ ಹೆಚ್ಚು ಬಿಪಿಎಲ್ ಕಾರ್ಡ್‌ಗಳಿರುವುದು ಅಚ್ಚರಿ ತಂದಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ ಸದಸ್ಯರು ಮದುವೆಯಾದ ಬಳಿಕ ಬೇರೆ ಇದ್ದೇವೆ ಎಂದು ಮತ್ತೊಂದು ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ಎರಡೂ ಕಾರ್ಡ್‌ಗಳಿಗೆ ಪಡಿತರ ವಿತರಣೆ ಶುರುವಾಗುತ್ತದೆ. ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸುವ ಕಾರ್ಯ ನಡೆದಿದೆ. ಹಾಗೆಂದು ಹೊಸ ಅರ್ಜಿಗಳ ಸ್ವೀಕಾರವನ್ನು ನಿಲ್ಲಿಸಿಲ್ಲ. ವೈದ್ಯಕೀಯ ಕಾರಣಗಳಿಗಾಗಿ ಬಿಪಿಎಲ್‌ ಕಾರ್ಡ್‌ ಪಡೆಯುವವರಿಗೆ ಇಲಾಖೆಯ ಪೋರ್ಟಲ್ ಮುಕ್ತವಾಗಿರಿಸಿದಾಗ ಬೇರೆಯವರೂ ಅರ್ಜಿ ಹಾಕಿದ್ದು, ಅಂತಹ ಮೂರು ಲಕ್ಷ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಫೆಬ್ರುವರಿ ತಿಂಗಳಿಂದ ಹೊಸ ಪಡಿತರ ಚೀಟಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗುತ್ತದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಬಿ‍ಪಿಎಲ್‌ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, ಇದು ಸೂಕ್ತವಾಗಿ ಬಳಕೆಯಾಗುತ್ತಿಲ್ಲ ಎಂಬ ಮಾಹಿತಿ ಇರುವುದರಿಂದ ಅಕ್ಕಿಯ ಬದಲು ದಕ್ಷಿಣ ಕರ್ನಾಟಕದಲ್ಲಿ ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ ಜೋಳ, ತೊಗರಿ ಬೇಳೆ ನೀಡಲು ಮುಂದಾಗಿದ್ದೇವೆ. ಆದಷ್ಟು ಶೀಘ್ರವೇ ಟೆಂಡರ್ ಕರೆದು ಜೋಳ, ತೊಗರಿ, ರಾಗಿಯನ್ನು ವಿತರಿಸಲಾಗುವುದು. ಟೆಂಡರ್ ಹಾಕಿದವರಿಗೆ ಕಲಬುರಗಿಯಲ್ಲಿ ಬೆಳೆದ ತೊಗರಿಯನ್ನೇ ಖರೀದಿಸಿ ಎಂದು ಹೇಳಲಾಗುವುದಿಲ್ಲ. ಗುಣಮಟ್ಟವೊಂದೇ ಮಾನದಂಡವಾಗಿರುತ್ತದೆ. ಆದಾಗ್ಯೂ, ಕಲಬುರಗಿ ಭಾಗದಲ್ಲಿ ಬೆಳೆದ ತೊಗರಿ ಖರೀದಿಸುವಂತೆ ಮೌಖಿಕವಾಗಿ ತಿಳಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.