ADVERTISEMENT

ಅಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದ ‘ಮಹಾನಾಯಕ’ನ ರಾಜೀನಾಮೆ ಯಾವಾಗ?: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 17:27 IST
Last Updated 26 ಮಾರ್ಚ್ 2021, 17:27 IST
ರಮೇಶ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್
ರಮೇಶ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪವಾಗಿದೆ. ಅನೈತಿಕ, ಅಧರ್ಮದ ರಾಜಕಾರಣಕ್ಕೆ ಮುನ್ನಡಿ ಬರೆದ ಈ ‘ಮಹಾನಾಯಕ’ನ ರಾಜೀನಾಮೆಯನ್ನು ತಕ್ಷಣವೇ ಪಡೆಯಬೇಕು’ ಎಂದು ಬಿಜೆಪಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದೆ.

‘ಸದನದ ಸದಸ್ಯನ ಹೆಸರು ಬಂದಿದೆ ಎಂಬ ನೆಪ ಹೇಳಿ ಸದನದಲ್ಲಿ ಕಲಾಪ ನಡೆಯಲೂ ಬಿಡದ ಕಾಂಗ್ರೆಸ್ ಸದಸ್ಯರೇ ಈಗೇನು ಹೇಳುವಿರಿ? ಮಹಾನಾಯಕ ಹೆಸರು ಪ್ರಸ್ತಾಪವಾಗಿದೆ. ವಿಶೇಷ ಅಧಿವೇಶನ ಕರೆದು ಚರ್ಚಿಸುವಷ್ಟು ವಿಚಾರಗಳಿವೆ. ಮಹಾನಾಯಕನ ರಾಜೀನಾಮೆ ಪಡೆದು ಸದನದಲ್ಲಿ ಈ ಬಗ್ಗೆ ಯಾವಾಗ ಚರ್ಚಿಸುತ್ತೀರಿ’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

‘ಸಿಡಿ ಪ್ರಕರಣದ ಸಂತ್ರಸ್ತೆ ನೇರವಾಗಿ ಡಿ.ಕೆ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜತೆ ಇದ್ದಾನೆ ಎಂಬ ಮಾತುಗಳನ್ನು ಆಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ? ಕಾಂಗ್ರೆಸ್‌ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ’ ಎಂದೂ ಪ್ರಶ್ನಿಸಿದೆ.

‘ಆರಂಭದಿಂದಲೂ ಮಹಾನಾಯಕನ ಸುತ್ತಲೂ ಪ್ರಕರಣ ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆಯ ಬಳಿ ನಾನು ಬಂದಿದ್ದೇನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್‌ ಮೈಂಡ್‌ಗಳಿಗೂ ಇರುವ ಸಂಬಂಧವನ್ನು ಕಾಂಗ್ರೆಸ್‌ ಬಹಿರಂಗಗೊಳಿಸಬೇಕು ಎಂದು ಟ್ವೀಟ್‌ನಲ್ಲಿ ಹೇಳಿದೆ.

‘ಒಬ್ಬ ಹೆಣ್ಣನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಪಡೆಯಲು ಷಡ್ಯಂತ್ರ ರೂಪಿಸಿದ ಕಾಂಗ್ರೆಸ್ ಜನತೆಯ ಕ್ಷಮಾಪಣೆ ಕೇಳಬೇಕು’ ಎಂದು ಒತ್ತಾಯಿಸಿದೆ.

‘ಭ್ರಷ್ಟಾಚಾರ ಪ್ರಕರಣದಲ್ಲಿ ಇ.ಡಿ ಮೂಲಕ ತಿಹಾರ್‌ ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿಡಿ ಪ್ರಕರಣದಲ್ಲೂ ತಿಹಾರ್‌ ಜೈಲಿಗೆ ಕಳಿಸಬೇಕಿದೆ. ದ್ವೇಷ ಸಾಧಿಸಲು ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ನಿರ್ಮಾಪಕ ಮಹಾನಾಯಕನ ಕುತಂತ್ರಕ್ಕೆ ಅಂತ್ಯ ಹಾಡಬೇಕಿದೆ’ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.