ADVERTISEMENT

Shakti Scheme: 500 ಕೋಟಿ ತಲುಪಲಿದೆ ‘ಶಕ್ತಿ’

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:49 IST
Last Updated 11 ಜುಲೈ 2025, 18:49 IST
ಶಕ್ತಿ ಯೋಜನೆ ಜಾರಿಯಾಗಿದ್ದ ವರ್ಷ ಬಸ್‌ ಹತ್ತಲು ಉಂಟಾಗಿದ್ದ ನೂಕುನುಗ್ಗಲು (ಸಾಂಧರ್ಭಿಕ ಚಿತ್ರ)
ಶಕ್ತಿ ಯೋಜನೆ ಜಾರಿಯಾಗಿದ್ದ ವರ್ಷ ಬಸ್‌ ಹತ್ತಲು ಉಂಟಾಗಿದ್ದ ನೂಕುನುಗ್ಗಲು (ಸಾಂಧರ್ಭಿಕ ಚಿತ್ರ)   

ಬೆಂಗಳೂರು: ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಜುಲೈ 10ರವರೆಗೆ 497 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದು, ಜುಲೈ 14ರಂದು 500 ಕೋಟಿ ತಲುಪುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ 2023ರ ಜೂನ್‌ 11ರಂದು ಆರಂಭವಾಗಿತ್ತು. ಅಲ್ಲಿಂದ ಜುಲೈ 10ರವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿಯಲ್ಲಿ ಒಟ್ಟು 836.49 ಕೋಟಿ ಜನರು ಪ್ರಯಾಣಿಸಿದ್ದಾರೆ. ಅದರಲ್ಲಿ 497 ಕೋಟಿ ಬಾರಿ ಮಹಿಳೆಯರು ಶಕ್ತಿ ಯೋಜನೆಯ ಉಚಿತ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಶಕ್ತಿ ಯೋಜನೆಯ ಟಿಕೆಟ್‌ ಮೌಲ್ಯ ₹ 12,593 ಕೋಟಿಯಾಗಿದೆ.

ಗುರುವಾರ ಒಂದೇ ದಿನ 1.26 ಕೋಟಿ ಜನರು ಪ್ರಯಾಣಿಸಿದ್ದು, ಅದರಲ್ಲಿ 81.06 ಲಕ್ಷ ಮಹಿಳೆಯರಾಗಿದ್ದಾರೆ. ಟಿಕೆಟ್‌ ಮೌಲ್ಯ ₹ 21.32 ಕೋಟಿ ಆಗಿದೆ.

ADVERTISEMENT

ಶಕ್ತಿ ಯೋಜನೆ ಜಾರಿಯಾಗುವುದಕ್ಕಿಂತ ಮೊದಲು ನಾಲ್ಕು ನಿಗಮಗಳ ಬಸ್‌ಗಳಲ್ಲಿ ದಿನಕ್ಕೆ 84.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಆನಂತರ ಸರಾಸರಿ 1.10 ಕೋಟಿಗೆ ಏರಿಕೆಯಾಗಿದೆ. ದುಡಿಯುವ ಮಹಿಳೆಯರು ಬಸ್‌ಗಳಲ್ಲಿಯೇ ಸಂಚರಿಸುತ್ತಿದ್ದಾರೆ. ಅಲ್ಲದೇ ಶಕ್ತಿ ಯೋಜನೆಯಿಂದಾಗಿ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳ ಸಹಿತ ವಿವಿಧೆಡೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. 

ಅತಿ ಹೆಚ್ಚು ಮಹಿಳೆಯರನ್ನು ಕರೆದೊಯ್ದ ಹಿರಿಮೆಗೆ ಬಿಎಂಟಿಸಿ ಪಾತ್ರವಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ 157.83 ಕೋಟಿ ಬಾರಿ ಮಹಿಳೆಯರು ಇಲ್ಲಿವರೆಗೆ ಸಂಚರಿಸಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ 150.97 ಕೋಟಿ, ಎನ್‌ಡಬ್ಲ್ಯುಆರ್‌ಟಿಸಿಯಲ್ಲಿ 116.34 ಕೋಟಿ ಹಾಗೂ ಕೆಕೆಆರ್‌ಟಿಸಿಯಲ್ಲಿ 71.84 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ.

ಟಿಕೆಟ್‌ ದರದ ಆಧಾರದಲ್ಲಿ ಕೆಎಸ್‌ಆರ್‌ಟಿಸಿ ಮುಂದಿದೆ. ಮಹಿಳೆಯರ ಟಿಕೆಟ್ ಮೌಲ್ಯ ಕೆಎಸ್‌ಆರ್‌ಟಿಸಿಯಲ್ಲಿ ₹ 4,786 ಕೋಟಿಯಾಗಿದೆ. ಟಿಕೆಟ್‌ ಮೌಲ್ಯಗಳು ಎನ್‌ಡಬ್ಲ್ಯುಆರ್‌ಟಿಸಿಯಲ್ಲಿ ₹ 3,115 ಕೋಟಿ, ಕೆಕೆಆರ್‌ಟಿಸಿಯಲ್ಲಿ ₹ 2521 ಕೋಟಿ, ಬಿಎಂಟಿಸಿಯಲ್ಲಿ ₹ 2169 ಕೋಟಿಯಾಗಿವೆ.

‘ಟಿಕೆಟ್‌ ವಿತರಿಸಲಿರುವ ಸಿಎಂ ಡಿಸಿಎಂ’

ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ ಮೈಲುಗಲ್ಲಿನ ಸಂಭ್ರಮಕ್ಕಾಗಿ ಜುಲೈ 14ರಂದು ವಿಶಿಷ್ಟವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಂದು ಯಾವುದಾದರೂ ಒಂದು ಬಸ್‌ನಲ್ಲಿ ಸಂಚರಿಸಿ ಟಿಕೆಟ್‌ ನೀಡಲಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಉಡುಗೊರೆಗಳನ್ನು ನೀಡಲಿದ್ದಾರೆ. ಅಲ್ಲದೇ ಎಲ್ಲ ಜಿಲ್ಲೆಗಳಲ್ಲಿ ಒಂದು ಬಸ್‌ ಅನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಗುವುದು. ಮಹಿಳೆಯರಿಗೆ ಸಿಹಿ ಹೂವು ಹಂಚಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.