
ಬೆಂಗಳೂರು: ಕಳೆದ ಮೂರು ಆರ್ಥಿಕ ವರ್ಷಗಳಿಂದ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಶಕ್ತಿ ಯೋಜನೆಯ ಬಾಕಿ ₹4,220.63 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಾರಿಗೆ ನಿಗಮಗಳು ಸಂಕಷ್ಟಕ್ಕೆ ತುತ್ತಾಗಿವೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಸಾರಿಗೆ ನಿಗಮಗಳ ಕುತ್ತಿಗೆ ಹಿಸುಕುತ್ತಿದೆ. ಉಚಿತ ಎನ್ನುವ ಬಣ್ಣದ ಮಾತುಗಳ ಹಿಂದೆ ಅಡಗಿರುವುದು ಸಾರಿಗೆ ಸಂಸ್ಥೆಗಳ ವಿನಾಶದ ಕಥೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಉಚಿತದ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಆಹುತಿ ಪಡೆಯಲು ಹೊರಟಿದೆ. ಶಕ್ತಿ ಯೋಜನೆಯ ಅಬ್ಬದ ಪ್ರಚಾರದ ನಡುವೆ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹಳ್ಳ ಹಿಡಿಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಸ್ವಯಂಕೃತ ಅಪರಾಧಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
ಸರ್ಕಾರವು ಸಾರಿಗೆ ನಿಗಮಗಳಿಗೆ 2023–24 ರಲ್ಲಿ ₹1,180.62 ಕೋಟಿ, 2024–25 ರಲ್ಲಿ ₹1,170.46 ಕೋಟಿ, 2025–26 ನೇ ಸಾಲಿಗೆ ₹1,869.56 ಕೋಟಿ ಒಟ್ಟು ₹4,220.63 ಕೋಟಿ ಬಾಕಿ ಪಾವತಿಸಬೇಕಾಗಿದೆ ಎಂದಿದ್ದಾರೆ.
ಇಷ್ಟು ಮೊತ್ತವನ್ನು ಪಾವತಿಸಲು ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆ. ಸಾರಿಗೆ ಇಲಾಖೆ ಪ್ರಸ್ತಾವನೆ ತಿರಸ್ಕರಿಸಿರುವುದು ಸಂಸ್ಥೆಗಳ ಪಾಲಿಗೆ ಮರಣ ಶಾಸನ ಬರೆದಂತಿದೆ. ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ವಂಚಿಸಿದೆ. ರಾಜ್ಯದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ನಾಲ್ಕು ಸಾರಿಗೆ ನಿಗಮಗಳನ್ನು ತನ್ನ ಗ್ಯಾರಂಟಿ ರಾಜಕೀಯಕ್ಕೆ ಬಲಿಪಶು ಮಾಡಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.