ADVERTISEMENT

‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಆಧಾರ್ ತೋರಿಸುವ ಬದಲು ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ

ಬಾಲಕೃಷ್ಣ ಪಿ.ಎಚ್‌
Published 15 ಫೆಬ್ರುವರಿ 2026, 23:30 IST
Last Updated 15 ಫೆಬ್ರುವರಿ 2026, 23:30 IST
ಕೆಎಸ್‌ಆರ್‌ಟಿಸಿಯ ಸ್ಮಾರ್ಟ್‌ ಇಟಿಎಂ
ಕೆಎಸ್‌ಆರ್‌ಟಿಸಿಯ ಸ್ಮಾರ್ಟ್‌ ಇಟಿಎಂ   

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ‘ಶಕ್ತಿ’ ಯೋಜನೆಯಡಿ ಸಂಚರಿಸುವ ಫಲಾನುಭವಿಗಳಿಗೆ ಸರ್ಕಾರ ನೀಡಲಿರುವ ಸ್ಮಾರ್ಟ್‌ಕಾರ್ಡ್‌ ಮೆಟ್ರೊ ಸಹಿತ ಬೇರೆ ಸಾರ್ವಜನಿಕ ಸಾರಿಗೆಗಳಲ್ಲಿಯೂ ಬಳಕೆಯಾಗಲಿದೆ. 

ಸ್ಮಾರ್ಟ್ ಕಾರ್ಡ್‌ ಅನ್ನು ಬಸ್‌ ನಿರ್ವಾಹಕರಿಗೆ ತೋರಿಸಿ ಟಿಕೆಟ್‌ ಪಡೆಯುವ ಬದಲು, ಇಟಿಎಂನಲ್ಲಿ ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ ಇದಾಗಿದೆ. ‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಕೂಡಾ ಆಗಿರುತ್ತದೆ. ಇದರಲ್ಲಿ ಪ್ರಯಾಣಿಕರ ಮಾಹಿತಿ ಇರುವ ಚಿಪ್‌ ಅಳವಡಿಕೆಯಾಗಿರುತ್ತದೆ. 

‘ಸ್ಮಾರ್ಟ್‌ ಚಿಪ್‌ನಲ್ಲಿ ಫಲಾನುಭವಿಗಳ ಇ–ಕೆವೈಸಿ ಮಾಡಲಾಗುತ್ತದೆ. ಇದರಿಂದ ಉಚಿತವಾಗಿ ಯಾರು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ದೊರೆಯಲಿದೆ. ಜೊತೆಗೆ ವಾಲೆಟ್‌ ಮೂಲಕ ಹಣ ತುಂಬಬಹುದಾಗಿರುವುದರಿಂದ ನಮ್ಮ ಮೆಟ್ರೊ ಅಥವಾ ದೇಶದ ಯಾವುದೇ ಮೆಟ್ರೊದಲ್ಲಿ ಮೆಟ್ರೊ ಕಾರ್ಡ್‌ನಂತೆಯೂ ಇದನ್ನು ಬಳಸಬಹುದು. ಟಿಕೆಟ್ ದರವು ವಾಲೆಟ್‌ನಿಂದ ಕಡಿತವಾಗುತ್ತದೆ. ವಿವಿಧ ಸಾರಿಗೆ ನಿಗಮಗಳ ಶಕ್ತಿ ಯೋಜನೆ ಅನ್ವಯವಾಗದ ಬಸ್‌ಗಳಲ್ಲಿಯೂ ಇದೇ ಕಾರ್ಡ್‌ ಮೂಲಕ ಟಿಕೆಟ್‌ ದರ ಪಾವತಿಸಲು ಅವಕಾಶ ಇರಲಿದೆ’ ಎಂದು ಶಕ್ತಿ ಸ್ಮಾರ್ಟ್‌ ಕಾರ್ಡ್‌ ನೋಡಲ್‌ ಅಧಿಕಾರಿಯೂ ಆಗಿರುವ ಕೆಎಸ್‌ಆರ್‌ಟಿಸಿಯ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ (ವಾಣಿಜ್ಯ) ರಾಜೇಶ್‌ ಮಾಹಿತಿ ನೀಡಿದರು.

ADVERTISEMENT

ಶಕ್ತಿ ಯೋಜನೆಯಡಿ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ನಿತ್ಯ ಸರಾಸರಿ 75.68 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ರಾಜ್ಯದ ಮಹಿಳೆಯರಿಗಷ್ಟೇ ಈ ಯೋಜನೆ ಇರುವುದು. ಬೇರೆ ರಾಜ್ಯಗಳ ಮಹಿಳೆಯರು ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಚರಿಸಿದರೂ ಗೊತ್ತಾಗುವುದಿಲ್ಲ. ಸ್ಮಾರ್ಟ್‌ಕಾರ್ಡ್‌ ಬಂದರೆ ನಕಲಿ ಕಾರ್ಡ್‌ ಬಳಕೆ ಸಾಧ್ಯವಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್‌ ಇಟಿಎಂ: ಕೆಎಸ್‌ಆರ್‌ಟಿಸಿಯಲ್ಲಿ ಈಗಾಗಲೇ ಸ್ವೈಪ್‌ ಮಾಡಿ ಟಿಕೆಟ್‌ ದರ ಪಾವತಿಸಬಹುದಾದ ಸ್ಮಾರ್ಟ್‌ ಇಟಿಎಂ (ಎಲೆಕ್ಟ್ರಾನಿಕ್‌ ಟಿಕೆಟ್‌ ಮಷೀನ್‌) ಇದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಆರ್‌ಟಿಸಿ) ಮತ್ತು ಬಿಎಂಟಿಸಿಯ ಕೆಲವು ಮಾರ್ಗಗಳಲ್ಲಿ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ)  ಮೂಲಕ ಟಿಕೆಟ್‌ ದರ ಪಾವತಿ ಮಾಡುವ ಪದ್ಧತಿ ಜಾರಿಯಲ್ಲಿದೆ. ಈ ಮಷೀನ್‌ನಲ್ಲಿ ‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಬಳಸಲು ಸಾಧ್ಯವಿಲ್ಲ. ಎನ್‌ಡಬ್ಲ್ಯುಆರ್‌ಟಿಸಿ, ಬಿಎಂಟಿಸಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ (ಕೆಕೆಆರ್‌ಟಿಸಿ) ಶೀಘ್ರದಲ್ಲಿಯೇ ಸ್ಮಾರ್ಟ್‌ ಇಟಿಎಂ ಅನುಷ್ಠಾನಗೊಳ್ಳಲಿದೆ ಎಂದು ಸಾರಿಗೆ ಅಧಿಕಾರಿಗಳು ವಿವರಿಸಿದ್ದಾರೆ.

ಉಚಿತವಾಗಿ ಇಲ್ಲವೇ ದರ ಪಾವತಿಸಿ ಪ್ರಯಾಣಿಸುವವರ ನಿರ್ವಹಣೆಯನ್ನು ಸುಗಮಗೊಳಿಸಲು ಶಕ್ತಿ ಸ್ಮಾರ್ಟ್‌ಕಾರ್ಡ್‌ ಅನುಷ್ಠಾನಗೊಳಿಸಲಾಗುತ್ತಿದೆ. ಏಕೀಕೃತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಹುದಾದ ಶುಲ್ಕ ಸಂಗ್ರಹಣ ವ್ಯವಸ್ಥೆಯನ್ನು ಇದು ಸುಗಮಗೊಳಿಸಲಿದೆ ಎಂದು ಹೇಳಿದ್ದಾರೆ.

ರಾಮಲಿಂಗಾರೆಡ್ಡಿ

ಸ್ಮಾರ್ಟ್‌ಕಾರ್ಡ್‌ ಉಚಿತ ವಿತರಣೆ

ಸ್ಮಾರ್ಟ್‌ಕಾರ್ಡ್‌ಗೆ ಸರ್ಕಾರ ಅನುಮೋದನೆ ನೀಡಿದೆ. ಫಲಾನುಭವಿಗಳಿಗೆ ಸರ್ಕಾರ ಉಚಿತವಾಗಿಯೇ ಕಾರ್ಡ್‌ ಒದಗಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸ್ಮಾರ್ಟ್‌ ಕಾರ್ಡ್‌ಗೆ ಸಂಬಂಧಿಸಿದ ಮಾರ್ಗಸೂಚಿ ರೂಪಿಸಬೇಕು. ಟೆಂಡರ್‌ ಪ್ರಕ್ರಿಯೆಗಳು ನಡೆಯಬೇಕು. ಇದು ₹10 ಕೋಟಿಗಿಂತ ಅಧಿಕ ವೆಚ್ಚದ ಯೋಜನೆ ಆಗಿರುವುದರಿಂದ ಪುನಃ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಕೆಲವು ತಿಂಗಳು ಬೇಕು. ಹಾಗಾಗಿ ಅಲ್ಲಿಯವರೆಗೆ ಆಧಾರ್‌ ಕಾರ್ಡ್‌ ತೋರಿಸಿ ಸಂಚರಿಸುವ ಈಗಿನ ವ್ಯವಸ್ಥೆ ಮುಂದುವರಿಯಲಿದೆ ಎಂದರು. ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಫಲಾನುಭವಿಗಳ ವಯಸ್ಸು ವಿಳಾಸ ಸಹಿತ ಎಲ್ಲ ಮಾಹಿತಿ ಇರುವುದರಿಂದ ‘ಶಕ್ತಿ’ ಯೋಜನೆಯಡಿ ಪ್ರಯಾಣಿಸಿದವರಲ್ಲಿ ಮಕ್ಕಳೆಷ್ಟು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಸಾಮಾನ್ಯ ವರ್ಗದ ಮಹಿಳೆಯರು ಎಷ್ಟು ಎಂಬ ಅಂಕಿ– ಅಂಶಗಳು ನಿಖರವಾಗಿ ಸಿಗಲಿದೆ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್‌ಕಾರ್ಡ್‌ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌

ಲಭ್ಯವಾಗಲಿದೆ ಫಲಾನುಭವಿಗಳ ನಿಖರ ಮಾಹಿತಿ 

ಅನುಷ್ಠಾನಕ್ಕೆ ಬೇಕು ಕನಿಷ್ಠ 6 ತಿಂಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.