ADVERTISEMENT

ಪಂಪ್ಡ್‌ ಸ್ಟೋರೇಜ್‌, ಎತ್ತಿನಹೊಳೆ: ತಜ್ಞರಿಂದ ನಾಳೆ ಮೌಲ್ಯಮಾಪನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 14:57 IST
Last Updated 25 ಅಕ್ಟೋಬರ್ 2025, 14:57 IST
   

ನವದೆಹಲಿ: ಎತ್ತಿನಹೊಳೆ ಯೋಜನೆಗೆ 432 ಎಕರೆ ಅರಣ್ಯದ ಪ್ರಸ್ತಾವ ಹಾಗೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಬಗ್ಗೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ತಜ್ಞರ ಸಮಿತಿಯು ಇದೇ 27ರಂದು ಮೌಲ್ಯಮಾಪನ ನಡೆಸಲಿದೆ. 

ಸೋಮವಾರ ನಡೆಯಲಿರುವ ಸಚಿವಾಲಯದ ಅರಣ್ಯ ಸಲಹಾ ಸಮಿತಿಯ ಸಭೆಯ ಕಾರ್ಯಸೂಚಿಯ ಪಟ್ಟಿಯಲ್ಲಿ ಈ ಎರಡು ಯೋಜನೆಗಳ ಪ್ರಸ್ತಾವಗಳು ಸೇರಿವೆ. 

ಎತ್ತಿನಹೊಳೆ ಯೋಜನೆಗೆ ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳದ ಕಾವಲ್, ಕಂಚಿಗಾನಹಳ್ಳಿ ಹಾಗೂ ಹಾಸನದ ಐದಹಳ್ಳಿ ಕಾವಲ್‌, ಕುಮರಿಹಳ್ಳಿ ಗ್ರಾಮದ ಅರಣ್ಯ ಭೂಮಿ ಬಳಸಲು ಒಪ್ಪಿಗೆ ಕೊಡಬೇಕು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಅವರು ಅರಣ್ಯ ಸಚಿವಾಲಯದ ಕಾರ್ಯದರ್ಶಿಗೆ ಅಕ್ಟೋಬರ್‌ 8ರಂದು ಪ್ರಸ್ತಾವ ಸಲ್ಲಿಸಿದ್ದರು. ‍‍ಪ್ರಸ್ತಾವದ ಮೌಲ್ಯಮಾಪನ ಮಾಡಲು ಸಚಿವಾಲಯವು ಸಲಹಾ ಸಮಿತಿಗೆ ಕಳುಹಿಸಿದೆ.  

ADVERTISEMENT

432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ಕೋರಿ ರಾಜ್ಯ ಸರ್ಕಾರ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಕಾರಣ ನೀಡಿ ಕೇಂದ್ರ ಅರಣ್ಯ ಸಲಹಾ ಸಮಿತಿ ಅನುಮೋದನೆ ಕೊಟ್ಟಿರಲಿಲ್ಲ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ತಾಕೀತು ಮಾಡಿತ್ತು.

ಶರಾವತಿ ಕಣಿವೆಯಲ್ಲಿ 2000 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಷರತ್ತುಬದ್ಧ ಅನುಮೋದನೆ ನೀಡಿತ್ತು. ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಲಹಾ ಸಮಿತಿ ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಿತ್ತು. ಸಮಿತಿಯು ಮೊದಲ ಸುತ್ತಿನ ಮೌಲ್ಯಮಾಪನವನ್ನು ಈ ವರ್ಷದ ಜುಲೈನಲ್ಲಿ ನಡೆಸಿತ್ತು. 

ಯೋಜನೆಗಾಗಿ ಕಡಿಯಲು ಪ್ರಸ್ತಾಪಿಸಲಾದ ಮರಗಳ ಸಂಖ್ಯೆ ಕಡಿಮೆ ಮಾಡುವ ಕುರಿತು ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿದ ಸಲಹೆಗಳಿಗೆ ಮತ್ತು ಅರಣ್ಯ ಸಚಿವಾಲಯದ  ಅರಣ್ಯ ಉಪ ಮಹಾನಿರೀಕ್ಷಕರ ಸ್ಥಳ ಪರಿಶೀಲನಾ ವರದಿಯ ಆಕ್ಷೇಪಗಳಿಗೆ ಪ್ರತಿಕ್ರಿಯಿಸುವಂತೆ ಸಮಿತಿಯು ರಾಜ್ಯ ಸರ್ಕಾರವನ್ನು ಕೇಳಿತ್ತು. ಸ್ಥಳ ಪರಿಶೀಲನಾ ವರದಿಯ ಆಕ್ಷೇಪಗಳಿಗೆ ರಾಜ್ಯ ಸರ್ಕಾರ ಕಳೆದ ತಿಂಗಳು ಸಮಜಾಯಿಷಿ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.