ADVERTISEMENT

ಶರಾವತಿ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಆಪತ್ತು

ವನ್ಯಜೀವಿ ಅನುಮೋದನೆಗೆ ಶಿಫಾರಸು ಮಾಡಿ ಡಿಸಿಎಫ್‌ಗಳ ‘ಕೊಕ್ಕೆ’

ಮಂಜುನಾಥ್ ಹೆಬ್ಬಾರ್‌
Published 21 ಜನವರಿ 2025, 19:24 IST
Last Updated 21 ಜನವರಿ 2025, 19:24 IST
ಶರಾವತಿ ಕೊಳ್ಳದ ಒಂದು ನೋಟ
ಶರಾವತಿ ಕೊಳ್ಳದ ಒಂದು ನೋಟ   

ನವದೆಹಲಿ: ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಅನುಷ್ಠಾನಗೊಳಿಸುತ್ತಿರುವ ₹8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಗೆ 134 ಎಕರೆ ಕಾಡು ಬಳಸುವ ಪ್ರಸ್ತಾವವನ್ನು ಶರಾವತಿ ವನ್ಯಜೀವಿಧಾಮದ ವ್ಯಾಪ್ತಿಯ ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್‌) ಶಿಫಾರಸು ಮಾಡಿದ್ದಾರೆ. ಆದರೆ, ಈ ಯೋಜನೆಯ ಅನುಷ್ಠಾನದಿಂದ ಪಶ್ಚಿಮ ಘಟ್ಟಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದೂ ಎಚ್ಚರಿಸಿದ್ದಾರೆ. 

ಶಿವಮೊಗ್ಗ, ಸಾಗರ ಹಾಗೂ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯೋಜನಾ ಸ್ಥಳ ಪರಿಶೀಲನೆ ನಡೆಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ (ಪಿಸಿಸಿಎಫ್‌) ಜನವರಿ ಮೂರನೇ ವಾರದಲ್ಲಿ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಪಿಸಿಸಿಎಫ್‌ ಅನುಮೋದನೆಯ ಬಳಿಕ ಈ ಪ್ರಸ್ತಾವದ ಬಳಿಕ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಚರ್ಚೆಯಾಗಲಿದೆ.

ಈ ಯೋಜನೆ ಕಾರ್ಯಸಾಧುವಲ್ಲ ಎಂದು ಮೂವರು ಡಿಸಿಎಫ್‌ಗಳು ಈ ಹಿಂದೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಆ ನಂತರ, ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದೀಗ, ಡಿಸಿಎಫ್‌ಗಳು ಯೋಜನೆಯ ಪರವಾಗಿ ಶಿಫಾರಸು ಮಾಡಿದ್ದಾರೆ. ಜತೆಗೆ, ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲಾಗುವ ಪರಿಣಾಮಗಳ ಬಗ್ಗೆ ಸುದೀರ್ಘ ಟಿಪ್ಪಣಿ ಬರೆದಿದ್ದಾರೆ. 

ADVERTISEMENT

‘ಈ ಯೋಜನೆಗಾಗಿ ಹೊಸ ಅಣೆಕಟ್ಟೆ ನಿರ್ಮಿಸುವುದಿಲ್ಲ ಎಂದು ಕೆಪಿಸಿ ಸ್ಪಷ್ಟಪಡಿಸಿದೆ. ಇದೊಂದು ನಿಯಮಿತ ಜಲವಿದ್ಯುತ್‌ ಯೋಜನೆ ಅಲ್ಲ ಎಂದೂ ತಿಳಿಸಿದೆ. ಆದರೆ, ನಿಗಮವು ನೀಡಿರುವ ಸ್ಪಷ್ಟೀಕರಣ ತೃಪ್ತಿಕರವಾಗಿಲ್ಲ. ಈ ಬಗ್ಗೆ ಇನ್ನಷ್ಟು ವಿವರಣೆ ಕೇಳುವುದು ಸೂಕ್ತ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಲವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಸುತ್ತೋಲೆ ಹೊರಡಿಸಿದೆ. ಈ ಯೋಜನೆಯು ಶರಾವತಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲೇ ಕಾರ್ಯಗತಗೊಳ್ಳುತ್ತಿದೆ. ಇದಕ್ಕೂ ಸ್ಪಷ್ಟನೆ ಪಡೆಯುವುದು ಉತ್ತಮ. ಈಗಿರುವ ವಿದ್ಯುತ್‌ ವಿತರಣಾ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಕರ್ನಾಟಕ ವಿದ್ಯುತ್‌ ನಿಗಮ ಹೇಳಿಕೊಂಡಿದೆ. ಇದಕ್ಕಾಗಿ ಹೊಸ ಟವರ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಹೆಚ್ಚುವರಿ ಕಾಡುಗಳ ಬಳಕೆಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಪ್ರಸ್ತಾವವನ್ನು ಶಿಫಾರಸು ಮಾಡುವ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವುದು ಸೂಕ್ತ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಯೋಜನೆಯಿಂದ ಪ್ರತಿಕೂಲ ಪರಿಣಾಮಗಳು

*ಅಭಯಾರಣ್ಯದೊಳಗೆ ಹೊಸ ರಸ್ತೆಗಳ ನಿರ್ಮಾಣ, ಈಗಿರುವ ರಸ್ತೆಗಳ ನಿರ್ಮಾಣ ಹಾಗೂ ಸುರಂಗಗಳ ನಿರ್ಮಿಸಬೇಕಿದೆ. ಇದರಿಂದಾಗಿ, ಕಾಡುಪ್ರಾಣಿಗಳ ಆವಾಸಸ್ಥಾನ ಛಿದ್ರವಾಗಲಿದೆ. ಈ ಯೋಜನೆ ಜಾರಿಯಿಂದಾಗಿ ಸಿಂಹದ ಬಾಲದ ಸಿಂಗಳಿಕ ಸೇರಿದಂತೆ ಅಪರೂಪದ ಸಸ್ತನಿಗಳ ಚಲನವಲನಕ್ಕೆ ಅಡ್ಡಿಯಾಗಲಿದೆ. ಅವುಗಳ ವರ್ತನೆಯಲ್ಲಿ ಬದಲಾವಣೆಯಾಗುವ ಸಂಭವ ಇದೆ. 

*ಯೋಜನೆಯ ಕಾಮಗಾರಿ, ಕಾರ್ಯಾಚರಣೆ ಹಾಗೂ ನಿರ್ವಹಣೆ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ವಾಹನಗಳ ನಿರಂತರ ಓಡಾಟದಿಂದಾಗಿ ಆವಾಸಸ್ಥಾನಕ್ಕೆ ತೊಂದರೆ ಆಗಲಿದೆ ಹಾಗೂ ಮಾಲಿನ್ಯ ಉಂಟಾಗಲಿದೆ. 

*ಯೋಜನೆಯ ಕಾಮಗಾರಿಗೆ ಐದು ವರ್ಷಗಳು ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಸುದೀರ್ಘ ಅವಧಿಯ ಕಾಮಗಾರಿಯಿಂದಾಗಿ ಕಾಡು, ವನ್ಯಜೀವಿ ಆವಾಸಸ್ಥಾನದ ಸ್ವರೂಪದಲ್ಲಿ ಬದಲಾವಣೆ ಆಗಲಿದೆ. ಭೂಕುಸಿತಕ್ಕೆ ಕಾರಣವಾಗಲಿದೆ. ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಆಗಲಿದೆ. 

*ಸುರಂಗ ನಿರ್ಮಾಣದ ಸಂದರ್ಭದಲ್ಲಿ ಕೊರೆಯುವಿಕೆ, ಸ್ಫೋಟಕಗಳ ಬಳಕೆಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅಪಾಯಗಳು ಎದುರಾಗಬಹುದು. 

*ಯೋಜನೆಗಾಗಿ ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ 15,000 ಮರಗಳ ಹನನ ಮಾಡಲಾಗುತ್ತದೆ. ಇದರಿಂದಾಗಿ, ಜೀವವೈವಿಧ್ಯಕ್ಕೆ ಭಾರಿ ಹಾನಿ ಆಗಲಿದೆ. 

*ಅರಣ್ಯ ಇಲಾಖೆ ನಡೆಸಿರುವ ಅಧ್ಯಯನದ ಪ್ರಕಾರ, ಈ ಅಭಯಾರಣ್ಯದಲ್ಲಿ ಸಿಂಹದ ಬಾಲದ ಸಿಂಗಳಿಕಗಳ ಸಂಖ್ಯೆ 730 ಇದೆ. ಈ ಯೋಜನೆಯಿಂದ ಇವುಗಳ ಆವಾಸಸ್ಥಾನಕ್ಕೆ ಕುತ್ತು ಉಂಟಾಗಿ ಅವುಗಳ ಸಂಖ್ಯೆ ಕಡಿಮೆಯಾಗುವ ಸಂಭವ ಇದೆ. 

*ಜಲವಿದ್ಯುತ್‌ ಯೋಜನೆಗೆ ಕಾಡು ಬಳಕೆಗೆ ಬಿಡಿ ಬಿಡಿಯಾಗಿ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಈ ಹಿಂದೆ ಸುತ್ತೋಲೆ ಹೊರಡಿಸಿದೆ. ಈಗಿನ ಪ್ರಸ್ತಾವದಲ್ಲಿ, ವಿದ್ಯುತ್‌ ಮಾರ್ಗ ನಿರ್ಮಾಣದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ವಿದ್ಯುತ್‌ ಮಾರ್ಗ ನಿರ್ಮಾಣಕ್ಕೆ ಇನ್ನಷ್ಟು ಕಾಡು ಕಡಿಯಬೇಕಾಗುತ್ತದೆ. ಆಗ ವನ್ಯಜೀವಿಗಳು ಹಾಗೂ ಜೀವವೈವಿಧ್ಯಕ್ಕೆ ಮತ್ತಷ್ಟು ಹಾನಿ ಆಗಲಿದೆ. 

(*ಶಿವಮೊಗ್ಗ, ಸಾಗರ ಹಾಗೂ ಹೊನ್ನಾವರ ಡಿಸಿಎಫ್‌ ವರದಿಯಲ್ಲಿನ ಟಿಪ್ಪಣಿಯ ಸಾರ)

ವನ್ಯಜೀವಿ ಕಾರ್ಯಕರ್ತರ ವಿರೋಧ...

ಅಭಿವೃದ್ಧಿ ಯೋಜನೆಗಳಿಂದಾಗಿ ಪಶ್ಚಿಮ ಘಟ್ಟದ ಮೇಲೆ ಈಗಾಗಲೇ ಅಪಾರ ಹಾನಿ ಆಗಿದೆ. ಘಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಹೆಚ್ಚಳಕ್ಕೆ ಇದೂ ಒಂದು ಕಾರಣ. ಪರಿಸರಕ್ಕೆ ಅಪಾರ ಹಾನಿ ಉಂಟು ಮಾಡುವ ಈ ಯೋಜನೆಯ ವಿರುದ್ಧ ಮೂಲೆಗದ್ದೆ ಸ್ವಾಮೀಜಿ ನೇತೃತ್ವದಲ್ಲಿ ಜನಾಂದೋಲನ ರೂಪಿಸಲಾಗುವುದು. ಫೆಬ್ರುವರಿ ಮೊದಲ ವಾರದಲ್ಲಿ ಸಭೆ ಸೇರಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. 

-ಸುಬ್ರಹ್ಮಣ್ಯ, ‘ಹಸಿರು ಸಾಗರ’ ಸಂಘಟನೆ

***

ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಲ ವಿದ್ಯುತ್ ಯೋಜನೆಯಲ್ಲ ಎಂದು ವಾದಿಸುವ ಮೂಲಕ ರಾಜ್ಯ ಸರ್ಕಾರವು ಸುಳ್ಳನ್ನು ಸತ್ಯ ಮಾಡಲು ಹೊರಟಿದೆ. ನೀರಿನಿಂದಲೇ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಿರುವಾಗ ಜಲ ವಿದ್ಯುತ್ ಯೋಜನೆ ಹೇಗಾಗುವುದಿಲ್ಲ? ಶರಾವತಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಪ್ರಕಾರ ಜಲ ವಿದ್ಯುತ್ ಯೋಜನೆಗಳನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದ ಪಾರಾಗಲು ಈ ರೀತಿಯ ಕಥೆ ಕಟ್ಟಲಾಗಿದೆ. 

–ರಾಘವೇಂದ್ರ, ಸಾಮಾಜಿಕ ಕಾರ್ಯಕರ್ತ

***

ಈ ಯೋಜನೆ ಅನುಷ್ಠಾನಗೊಂಡರೆ ಶರಾವತಿ ಕಣಿವೆಗೆ ಭರಿಸಲಾಗದ ಹಾನಿ ಉಂಟಾಗಲಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರವೇ ಕಂಡುಬರುವ ಸಿಂಹ ಬಾಲದ ಸಿಂಗಳಿಕಗಳಿಗೆ ಮರಣ ಶಾಸನವಾಗಲಿದೆ. ಅತೀ ಸೂಕ್ಷ್ಮ ಪರಿಸರ ವ್ಯವಸ್ಥೆಯಾಗಿರುವ ಮಿರಿಸ್ಟಿಕಾ ಜೌಗುಗಳ ಕೊನೆಯ ಉಳಿದ ಆವಾಸಸ್ಥಾನಗಳು ಶಾಶ್ವತವಾಗಿ ನಾಶವಾಗುವ ಭೀತಿಯಿದೆ. ಈ ಪರಿಸರ ವಿನಾಶಕಾರಿ ಯೋಜನೆಯನ್ನು ರಾಜ್ಯ ವನ್ಯಜೀವಿ ಮಂಡಳಿ ಶಿಫಾರಸು ಮಾಡುವುದಿಲ್ಲ ಎಂಬ ಆಶಾವಾದವಿದೆ.

-ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.