ನವದೆಹಲಿ: ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (ಕೆಪಿಸಿಎಲ್) ಅನುಷ್ಠಾನಗೊಳಿಸುತ್ತಿರುವ ₹8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆಗೆ 134 ಎಕರೆ ಕಾಡು ಬಳಸುವ ಪ್ರಸ್ತಾವವನ್ನು ಕರ್ನಾಟಕ ಅರಣ್ಯ ಪಡೆಯ ಮುಖ್ಯಸ್ಥೆ (ಪಿಸಿಸಿಎಫ್) ಮೀನಾಕ್ಷಿ ನೇಗಿ ಅನುಮೋದನೆ ನೀಡಿದ್ದಾರೆ. ಇದೀಗ, ಈ ಶಿಫಾರಸು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ.
ಈ ಪ್ರಸ್ತಾವವನ್ನು ಶರಾವತಿ ವನ್ಯಜೀವಿಧಾಮದ ವ್ಯಾಪ್ತಿಯ ಶಿವಮೊಗ್ಗ, ಸಾಗರ ಹಾಗೂ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಜನವರಿಯಲ್ಲಿ ಶಿಫಾರಸು ಮಾಡಿದ್ದರು. ಜತೆಗೆ, ಈ ಯೋಜನೆಯ ಅನುಷ್ಠಾನದಿಂದ ಪಶ್ಚಿಮ ಘಟ್ಟದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು. ಮೂವರು ಡಿಸಿಎಫ್ ಹಾಗೂ ಕೆನರಾ ಮತ್ತು ಶಿವಮೊಗ್ಗ ವೃತ್ತದ ಸಿಸಿಎಫ್‌ಗಳ ವರದಿಯನ್ನು ಅರಣ್ಯ ಪಡೆಯ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ. ಆದರೆ, ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಡಿಸಿಎಫ್‌ಗಳ ಎಚ್ಚರಿಕೆಯ ಮಾತುಗಳನ್ನು ಅರಣ್ಯ ಪಡೆಯ ಮುಖ್ಯಸ್ಥರು ಕೈಬಿಟ್ಟಿದ್ದಾರೆ. ಅರಣ್ಯ ಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ವಾರದಲ್ಲೇ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಕಾಡು ಕಡಿಯಲು ಹಸಿರು ನಿಶಾನೆ ತೋರಿದ್ದಾರೆ.
ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾ ವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬಳಸುವ ಈ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ವಿದ್ಯುತ್ ಪ್ರಾಧಿಕಾರ 2024ರಲ್ಲಿ ಅನುಮೋದನೆ ನೀಡಿತ್ತು. ಈ ವಿದ್ಯುತ್ ಯೋಜನೆಯನ್ನು ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳ ನಡುವೆ ನಿರ್ಮಿಸಲಾಗುತ್ತದೆ. ತಲಕಳಲೆ ಅಣೆಕಟ್ಟೆ ಮೇಲಿನ ಜಲಾಶಯ ಆಗಿರಲಿದೆ. ಗೇರುಸೊಪ್ಪ ಅಣೆಕಟ್ಟೆ ಕೆಳಗಿನ ಜಲಾಶಯ ಆಗಿರಲಿದೆ.
ಅಳಿವಿನಂಚಿನಲ್ಲಿರುವ ಸಿಂಹದ ಬಾಲದ ಸಿಂಗಳಿಕಗಳ ಆವಾಸಸ್ಥಾನದಲ್ಲೇ ಈ ಜಲವಿದ್ಯುತ್ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟ ಇನ್ನಷ್ಟು ಹಾನಿ ಉಂಟಾಗಲಿದೆ ಎಂದು ವನ್ಯಜೀವಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಸುತ್ತೋಲೆ ಹೊರಡಿಸಿರುವುದು ಮತ್ತು ಈ ಯೋಜನೆಯು ಶರಾವತಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲೇ ಕಾರ್ಯಗತಗೊಳ್ಳುತ್ತಿದೆ ಎಂಬುದು ಹೌದಾದರೂ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಲ ವಿದ್ಯುತ್ ಯೋಜನೆಯೊಂದಿಗೆ ಸಮೀಕರಿಸುವುದು ಸರಿಯಲ್ಲ. ಏಕೆಂದರೆ, ಜಲ ವಿದ್ಯುತ್ ಯೋಜನೆ ಎಂಬುದು ಪಂಪ್ಡ್ ಸ್ಟೋರೇಜ್ ಯೋಜನೆಗಿಂತ ವಿಭಿನ್ನವಾಗಿದ್ದು, ಈ ಯೋಜನೆಯಡಿ ಜಲಾಶಯಗಳನ್ನು ನಿರ್ಮಿಸುವ ಅಗತ್ಯ ಇರುವುದಿಲ್ಲ ಎಂದು ಕೆಪಿಸಿಎಲ್ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.