ADVERTISEMENT

‘ಶೆಫರ್ಡ್ಸ್‌’ ರಾಜ್ಯ ಘಟಕ ಉದ್ಘಾಟನೆ 23ಕ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 21:25 IST
Last Updated 20 ಫೆಬ್ರುವರಿ 2020, 21:25 IST
ಎಂ. ನಾಗರಾಜ್
ಎಂ. ನಾಗರಾಜ್   

ಬೆಂಗಳೂರು: ‘ದೇಶದಲ್ಲಿ 12 ಕೋಟಿ ಕುರುಬರು ಇದ್ದು, ಎಲ್ಲರೂ ಹಂಚಿಹೋಗಿದ್ದಾರೆ. ಇವರೆಲ್ಲರನ್ನೂ ಸಂಘಟಿಸುವ ಉದ್ದೇಶದಿಂದ ಶೆಫರ್ಡ್ಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ (ಎಸ್‌ಐಐ) ಸಂಸ್ಥೆ ರಚನೆಯಾಗಿದ್ದು, ಈ ಸಂಸ್ಥೆಯ ರಾಜ್ಯಘಟಕದ ಉದ್ಘಾಟನೆ ಇದೇ 23ರಂದು ನಗರದಲ್ಲಿ ನಡೆಯಲಿದೆ’ ಎಂದು ರಾಷ್ಟ್ರಘಟಕದ ಅಧ್ಯಕ್ಷ ಎಚ್. ವಿಶ್ವನಾಥ್‌ ಹೇಳಿದರು.

‘ಕುರುಬ ಸಮುದಾಯದ ಏಳಿಗೆ ಕುರಿತು ಚರ್ಚಿಸಲು ಮತ್ತು ಸಂಘಟಿಸಲು ಮುಂದಿನ ಜೂನ್‌ನಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದ, ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಅಂತರರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕುರುಬರು ದೇಶದ ಮೂಲನಿವಾಸಿಗಳು. ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತಿದೆ ಮತ್ತು ಬೇರೆ ಬೇರೆ ಮೀಸಲಾತಿ ಪಟ್ಟಿಯಲ್ಲಿ ನಮೂದಿಸಲಾಗಿದೆ. ಈ ನಿಟ್ಟಿನಲ್ಲಿ ಕುರುಬ ಸಮುದಾಯದ ಜೊತೆಗೆ, ಎಲ್ಲ ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ಕಾಲ–ಕಾಲಕ್ಕೆ ಚರ್ಚಿಸಿ, ಶೋಷಿತ ವರ್ಗಗಳನ್ನು ಸಂಘಟಿಸುವ ಮತ್ತು ಹೋರಾಟದ ನೇತೃತ್ವ ವಹಿಸುವ ಕೆಲಸವನ್ನು ಎಸ್‌ಐಐ ಮಾಡಲಿದೆ’ ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಎಚ್.ಎಂ. ರೇವಣ್ಣ, ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆಯಿದ್ದು, ಇದಕ್ಕಾಗಿ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ತೆಲಂಗಾಣದಲ್ಲಿ ಕುರುಬ ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಲವು ಕೊಡುಗೆ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ 20 ಕುರಿ, 1 ಟಗರು ನೀಡಲಾಗುತ್ತಿದೆ. ಅಲ್ಲದೆ, ಕುರುಬರ ಅಭಿವೃದ್ಧಿಗೆ ₹5 ಸಾವಿರ ಕೋಟಿ ನೀಡಿದ್ದಾರೆ’ ಎಂದು ತಿಳಿಸಿದರು.

ಆಯ್ಕೆ:ಎಸ್‌ಐಐನ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಎಂ. ನಾಗರಾಜ್‌ ಅವರನ್ನು, ಪ್ರಧಾನ ಕಾರ್ಯದರ್ಶಿಯಾಗಿ ಎಂ. ನಾಗರಾಜ್‌ (ಐಟಿಐ) ಅವರನ್ನು ಆಯ್ಕೆ ಮಾಡಲಾಯಿತು.

*
ಹಿಂದುತ್ವವನ್ನು ಪ್ರತಿಪಾದಿಸಿದ ಮೊದಲ ರಾಣಿ ಅಹಲ್ಯಾಬಾಯಿ ಹೋಳ್ಕರ್‌. ಕುರುಬ ಸಮುದಾಯದ ಈ ರಾಣಿ ಕಪ್ಪು ಕಂಬಳಿ ಮೇಲೆ ಕುಳಿತು ರಾಜ್ಯಭಾರ ಮಾಡಿದ್ದರು.
-ಎಚ್. ವಿಶ್ವನಾಥ್, ಎಸ್‌ಐಐ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.