ADVERTISEMENT

ಶಿರಾಡಿ: ಕಾರು ತಡೆದು ಲೂಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 20:03 IST
Last Updated 15 ಜುಲೈ 2019, 20:03 IST

ನೆಲ್ಯಾಡಿ(ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನಕ್ಕೆ ಜಾಗ ನೀಡಲಿಲ್ಲ ಎಂಬ ನೆಪವೊಡ್ಡಿದ ನಾಲ್ವರು ಯುವಕರ ತಂಡಭಾನುವಾರ ಕಾರಿನಲ್ಲಿದ್ದ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿ ಲ್ಯಾಪ್ ಟಾಪ್, ಮೊಬೈಲ್, ಜಾಕೆಟ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ ಪತಿ ವೀರಭದ್ರ ಎಂಬುವರು ದರೋಡೆಗೆ ಒಳಗಾದವರು. ಬೆಂಗಳೂರಿನಿಂದ
ಬ್ರಹ್ಮಾವರಕ್ಕೆ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ಕೃತ್ಯ ನಡೆದಿದೆ. ಶನಿವಾರ ತಡ ರಾತ್ರಿ ರಸ್ತೆಯಲ್ಲಿ ತಮ್ಮ ವಾಹನಕ್ಕೆ ಓವರ್ ಟೇಕ್ ಮಾಡಲು ಅವಕಾಶ ಕೊಡಲಿಲ್ಲವೆಂದು ನೆಪವೊಡ್ಡಿ ರಿಟ್ಜ್‌ ಕಾರಿನಲ್ಲಿ ಬಂದ ನಾಲ್ವರು ಶಿರಾಡಿ ಘಾಟ್-ಗುಂಡ್ಯ ಮಧ್ಯೆ ವೀರಭದ್ರ ಅವರ ಕಾರನ್ನು ಅಡ್ಡಗಟ್ಟಿ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಈ ಮಧ್ಯೆ ಕಾರಿನಲ್ಲಿದ್ದ ಸುಮಾರು ₹1.06 ಲಕ್ಷ ಮೌಲ್ಯದ ಲ್ಯಾಪ್ ಟಾಪ್, ಮೊಬೈಲ್, ಜಾಕೆಟ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.

ವೀರಭದ್ರ ಅವರು ಒಬ್ಬರೇ ಪ್ರಯಾಣಿಸುತ್ತಿದ್ದು, ಯುವಕರಿಂದ ಪಾರಾಗಿ ಬ್ರಹ್ಮಾವರ ತಲುಪಿದ ಮೇಲೆ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಸ್ವತ್ತುಗಳು ದರೋಡೆಗೊಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.